ದುಡಿದ ದುಡ್ಡಿನಲ್ಲಿ ಸ್ವಲ್ಪವನ್ನಾದರೂ ಸಮಾಜಕ್ಕೆ ನೀಡಿದಾಗ ಸಾರ್ಥಕತೆ: ಆರ್.ಎಸ್. ಹಿರೇಮಠ
ಯಚ್ಚರೇಶ್ವರ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಬಯೋಸ್ಟ್ಯಾಂಡ್ ವತಿಯಿಂದ ₹3 ಸಾವಿರ ಶಿಷ್ಯವೇತನ
ಗದಗವಾಣಿ ಸುದ್ದಿಮೂಲ ಹೊಳೆಆಲೂರು, ಆ.31:
ದುಡಿದು ಗಳಿಸಿದ ಹಣದಲ್ಲಿ ಸ್ವಲ್ಪ ಭಾಗವನ್ನಾದರೂ ಪ್ರತಿ ವರ್ಷ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ವಿನಿಯೋಗಿಸಿದಾಗ ಮನಸ್ಸಿಗೆ ತೃಪ್ತಿ ಹಾಗೂ ಬದುಕಿಗೆ ಸಾರ್ಥಕತೆ ದೊರೆಯುತ್ತದೆ ಎಂದು ವೀರಭದ್ರೇಶ್ವರ ಟ್ರೇಡರ್ಸ್ ಮಾಲೀಕ ಆರ್.ಎಸ್. ಹಿರೇಮಠ ಹೇಳಿದರು.
ಪಟ್ಟಣದ ಯಚ್ಚರೇಶ್ವರ ವಿದ್ಯಾಸಂಸ್ಥೆಯ ಪ್ರೌಢಶಾಲೆಯಲ್ಲಿ ಸೋಮವಾರ ಶ್ರೀ ವೀರಭದ್ರೇಶ್ವರ ಟ್ರೇಡರ್ಸ್ ಹಾಗೂ ಬಯೋಸ್ಟ್ಯಾಂಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಶಿಷ್ಯವೇತನ ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಬಯೋಸ್ಟ್ಯಾಂಡ್ ಕಂಪನಿಯು ಸುಮಾರು 40 ವರ್ಷಗಳಿಂದ ರೈತರಿಗೆ ಗುಣಮಟ್ಟದ ಸಸ್ಯಪ್ರಚೋದಕಗಳು, ಕ್ರಿಮಿನಾಶಕಗಳು, ಕಳೆನಾಶಕಗಳು ಹಾಗೂ ಶಿಲೀಂಧ್ರನಾಶಕಗಳನ್ನು ಪೂರೈಸುತ್ತಾ ಬಂದಿದೆ. ಸಂಸ್ಥೆಯು ಪ್ರತಿ ವರ್ಷ ದೇಶದಾದ್ಯಂತ ರೈತರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕೋಟ್ಯಂತರ ರೂಪಾಯಿ ನೆರವು ನೀಡುತ್ತಿರುವುದು ಹೆಮ್ಮೆಯ ಸಂಗತಿ. ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವ ಮೂಲಕ ಸಂಸ್ಥೆಯು ಸಾಮಾಜಿಕ ಹೊಣೆಗಾರಿಕೆಯನ್ನು ಮೆರೆದಿದೆ ಎಂದರು.
ವಿದ್ಯಾರ್ಥಿಗಳಿಗೆ ನೀಡಲಾಗಿರುವ ಶಿಷ್ಯವೇತನವನ್ನು ಶೈಕ್ಷಣಿಕ ಸಾಮಗ್ರಿಗಳ ಖರೀದಿ ಸೇರಿದಂತೆ ಅಗತ್ಯ ಕಲಿಕಾ ಚಟುವಟಿಕೆಗಳಿಗೆ ಸದುಪಯೋಗಪಡಿಸಿಕೊಳ್ಳಬೇಕು. ಬಹುತೇಕ ವಿದ್ಯಾರ್ಥಿಗಳು ಕೃಷಿಕರ ಮಕ್ಕಳಾಗಿರುವುದರಿಂದ ಶಾಲಾ ಅವಧಿ ಮುಗಿದ ನಂತರ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಂಡು ಕೃಷಿಯ ಬಗ್ಗೆ ಪ್ರಾಯೋಗಿಕ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಯೋಸ್ಟ್ಯಾಂಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಮ್ಯಾನೇಜರ್ ನವೀನ್ ಎಸ್. ಮಾತನಾಡಿ, ನಮ್ಮ ಸಂಸ್ಥೆಯು 150ಕ್ಕೂ ಅಧಿಕ ಉತ್ಪನ್ನಗಳನ್ನು ಹೊಂದಿದ್ದು, ವಿವಿಧ ಬೆಳೆಗಳಿಗೆ ಅಗತ್ಯವಿರುವ ಉತ್ಪನ್ನಗಳನ್ನು ರೈತರಿಗೆ ಒದಗಿಸುತ್ತಿದೆ. ಸಂಸ್ಥೆಗೆ ದೊರೆಯುವ ಲಾಭಾಂಶದ ಒಂದು ಭಾಗವನ್ನು ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕಾಗಿ ಶಿಷ್ಯವೇತನ ರೂಪದಲ್ಲಿ ನೀಡಲಾಗುತ್ತಿದೆ ಎಂದರು.
ಈ ಬಾರಿ ಯಚ್ಚರೇಶ್ವರ ಶಿಕ್ಷಣ ಸಂಸ್ಥೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಪೈಕಿ ಪ್ರತಿಭಾನ್ವಿತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ತಲಾ ₹3 ಸಾವಿರ ಶಿಷ್ಯವೇತನವನ್ನು ಡಿಬಿಟಿ ಮೂಲಕ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ವಿದ್ಯಾರ್ಥಿಗಳು ಈ ಹಣವನ್ನು ಶೈಕ್ಷಣಿಕ ಸಾಮಗ್ರಿಗಳಿಗೆ ಬಳಸಿಕೊಂಡು ಮುಂಬರುವ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಶಾಲೆ ಹಾಗೂ ಬಯೋಸ್ಟ್ಯಾಂಡ್ ಸಂಸ್ಥೆಗೆ ಕೀರ್ತಿ ತರಬೇಕು. ಕಠಿಣ ಪರಿಶ್ರಮ ಹಾಗೂ ನಿರಂತರ ಅಭ್ಯಾಸದಿಂದ ಮಾತ್ರ ಉತ್ತಮ ಫಲಿತಾಂಶ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಎ.ಎನ್. ಬಡಿಗೇರ, ಗೌರವ ಅಧ್ಯಕ್ಷ ಕೆ.ಸಿ. ಪಾಟೀಲ ಹಿರೇಮಠ, ಸಹಕಾರ್ಯದರ್ಶಿ ಎಸ್.ಎಲ್. ಬದಾಮಿ, ಗೌರವ ಕಾರ್ಯದರ್ಶಿ ಪಾಂಡುರಂಗ ಪತ್ತಾರ, ಸಹಕಾರ್ಯದರ್ಶಿ ವೀರಯ್ಯ ವಸ್ತ್ರದ, ಬಯೋಸ್ಟ್ಯಾಂಡ್ ಸಂಸ್ಥೆಯ ಸೇಲ್ಸ್ ಆಫೀಸರ್ ಪ್ರವೀಣ ಮಠಪತಿ, ರಮೇಶಗೌಡ, ಕೃಷಿ ಅಧಿಕಾರಿಗಳಾದ ಸಾವಿತ್ರಿ ಶಿವನಗೌಡ್ರ, ಮಾಜಿ ತಾಪಂ ಸದಸ್ಯ ರಾಮನಗೌಡ ಪಾಟೀಲ, ಪ್ರಗತಿಪರ ರೈತರಾದ ಭರಮಗೌಡ ರಾಯನಗೌಡ್ರ, ಶರಣಪ್ಪ ಕೆಂಗಾರ, ಸತೀಶ ಕುರಿ, ಸಂಗಮೇಶ ಜಾಲಿಹಾಳ, ಭದ್ರಯ್ಯ ರೇಶ್ಮಿ, ಮಲ್ಲೇಶ ಐಹೊಳ್ಳೆ, ಯಚ್ಚರಪ್ಪ ತಳವಾರ, ವಿಕ್ರಮ ಬರಡ್ಡಿ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಮಿತ್ ಕುಮಾರ ಹಿರೇಮಠ ಸೇರಿದಂತೆ ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕಿ ಎಸ್.ಎಂ. ಮನಗೂಳಿ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕ ಎಸ್.ಎನ್. ಎಲೆಗಾರ ವಂದಿಸಿದರು.
ಹೊಳೆಆಲೂರು, ಆ.31
ಫೋಟೋ ಶೀರ್ಷಿಕೆ:
ಹೊಳೆಆಲೂರಿನ ಯಚ್ಚರೇಶ್ವರ ವಿದ್ಯಾಸಂಸ್ಥೆಯ ಪ್ರೌಢಶಾಲೆಯಲ್ಲಿ ಬಯೋಸ್ಟ್ಯಾಂಡ್ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಪ್ರಮಾಣಪತ್ರ ವಿತರಿಸಲಾಯಿತು.


