ಗದಗವಾಣಿ ಸುದ್ದಿಮೂಲ
ಗದಗ: ಜಂಟಿ ಜಮೀನು ಅಭಿವೃದ್ಧಿ ಒಪ್ಪಂದದ ಹೆಸರಿನಲ್ಲಿ ವೃದ್ಧ ಕೃಷಿಕರೊಬ್ಬರಿಗೆ ನಂಬಿಸಿ, ವೃತ್ತಾಕಾರದ ಬ್ಯಾಂಕ್ ಹಣ ವರ್ಗಾವಣೆ (Circular Money Transfer) ಮೂಲಕ ಕೋಟ್ಯಾಂತರ ರೂಪಾಯಿ ಮೌಲ್ಯದ 11 ಪ್ಲಾಟ್ಗಳನ್ನು ನಕಲಿ ಮಾರಾಟ ಪತ್ರದ ಮೂಲಕ ಲಪಟಾಯಿಸಿ ವಂಚಿಸಿರುವ ಆಘಾತಕಾರಿ ಪ್ರಕರಣವೊಂದು ಗದಗ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಗದಗ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಮುಖ ಸೂತ್ರಧಾರಿ ಸೇರಿ ಒಟ್ಟು ಎಂಟು ಜನರ ವಿರುದ್ಧ ಗಂಭೀರ ವಂಚನೆ ಪ್ರಕರಣ ದಾಖಲಾಗಿದೆ.
ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ಹಾರೋಗೇರಿ ನಿವಾಸಿ ಮೊಹಮ್ಮದಾಲಿ ಅಮೀನಾಸಾಬ್ ಹೊಂಬಳ (68) ಎಂಬುವವರೇ ವಂಚನೆಗೊಳಗಾದ ದುರ್ದೈವಿ ಕೃಷಿಕರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಇರಾನಿ ಕಾಲೋನಿಯ ಯುಪಿಎಸ್ಸಿ ಆಕಾಂಕ್ಷಿ ಅಯೂಬ್ ಸಣ್ಣಹಾಸನಾಸಾಬ್ ನದ್ದಿಮುಲ್ಲಾ ನೀಡಿದ ಲಿಖಿತ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಂಟಿ ಅಭಿವೃದ್ಧಿ ಒಪ್ಪಂದದ ಹೆಸರಲ್ಲಿ ಎಂಟ್ರಿ ಕೊಟ್ಟ ‘ಮಾಸ್ಟರ್ ಮೈಂಡ್’

ದೂರಿನ ವಿವರಗಳ ಪ್ರಕಾರ, ಸಂತ್ರಸ್ತ ಮೊಹಮ್ಮದಾಲಿ ಹೊಂಬಳ ಅವರಿಗೆ ಗದಗ ತಾಲ್ಲೂಕಿನ ಅಸುಂಡಿ ಗ್ರಾಮದಲ್ಲಿ ಸರ್ವೆ ನಂ. 51/3 ರಲ್ಲಿ 2 ಎಕರೆ ಕೃಷಿ ಭೂಮಿ ಇತ್ತು. ಈ ಭೂಮಿಯನ್ನು ವಸತಿ ಲೇಔಟ್ ಆಗಿ ಅಭಿವೃದ್ಧಿಪಡಿಸಲು 2023 ರ ಜುಲೈ 31 ರಂದು ಗದಗ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪ್ರಮುಖ ಆರೋಪಿ ಸಯ್ಯದ್ ರಶೀದ್ ಅಬ್ದುಲ್ಗನಿ ಮಕಾಂದರ್ ಎಂಬಾತನೊಂದಿಗೆ ‘ಜಂಟಿ ಲೇಔಟ್ ಅಭಿವೃದ್ಧಿ ಒಪ್ಪಂದ’ (Joint Layout Development Agreement) ಮಾಡಿಕೊಳ್ಳಲಾಗಿತ್ತು. ಒಪ್ಪಂದದ ಪ್ರಕಾರ, ಕೃಷಿ ಭೂಮಿಯನ್ನು ವಸತಿ ಭೂಮಿಯಾಗಿ ಪರಿವರ್ತಿಸಿ, ರಸ್ತೆ, ನೀರು, ವಿದ್ಯುತ್ ಸೇರಿ ಎಲ್ಲಾ ಸೌಕರ್ಯಗಳನ್ನು ಆರೋಪಿಯೇ ಸ್ವಂತ ಖರ್ಚಿನಲ್ಲಿ 7 ತಿಂಗಳೊಳಗೆ ಅಭಿವೃದ್ಧಿಪಡಿಸಬೇಕಿತ್ತು. ಪ್ರತಿಯಾಗಿ ಶೇ. 30 ರಷ್ಟು ಸೈಟುಗಳನ್ನು (ಅಂದರೆ 11 ಪ್ಲಾಟ್ಗಳನ್ನು) ಆರೋಪಿ ಸಯ್ಯದ್ ರಶೀದ್ಗೆ ಉಚಿತವಾಗಿ ನೀಡಲು ನಿರ್ಧರಿಸಲಾಗಿತ್ತು.
ವೃತ್ತಾಕಾರದ ಹಣ ವರ್ಗಾವಣೆಯ ಮಾಸ್ಟರ್ ಪ್ಲಾನ್!
ಅಭಿವೃದ್ಧಿ ಕಾರ್ಯ ಮುಗಿದ ನಂತರ, ಆರೋಪಿ ಸಯ್ಯದ್ ರಶೀದ್ ಈ 11 ಪ್ಲಾಟ್ಗಳನ್ನು ಕಾನೂನುಬಾಹಿರವಾಗಿ ತನ್ನದಾಗಿಸಿಕೊಳ್ಳಲು ತನ್ನ ಸಹಚರರೊಂದಿಗೆ ಸೇರಿ ಕ್ರಿಮಿನಲ್ ಸ್ಕೆಚ್ ಹಾಕಿದ್ದಾನೆ. ತಾನು ಉಚಿತವಾಗಿ ಪಡೆಯಬೇಕಿದ್ದ ಸೈಟುಗಳಿಗೆ ತಾನೇ ಹಣ ಪಾವತಿಸುತ್ತಿರುವುದಾಗಿ ಬಿಂಬಿಸಲು ವಂಚನೆಯ ಜಾಲ ಹೆಣೆದಿದ್ದಾನೆ.
2026 ರ ಜನವರಿ 2 ರಂದು ಆರೋಪಿ ಸಯ್ಯದ್ ರಶೀದ್, ಸಂತ್ರಸ್ತ ಹೊಂಬಳ ಅವರ ಆರ್ಬಿಎಲ್ (RBL) ಬ್ಯಾಂಕ್ ಖಾತೆಗೆ ಆರ್ಟಿಜಿಎಸ್ ಮೂಲಕ 12 ಲಕ್ಷ ರೂ. ವರ್ಗಾಯಿಸಿದ್ದಾನೆ. ನಂತರ ಹಂತ ಹಂತವಾಗಿ ಜನವರಿ 12 ರವರೆಗೆ ಒಟ್ಟು 24,86,952/- ರೂ.ಗಳನ್ನು ಜಮೆ ಮಾಡಿದ್ದಾನೆ. ಆದರೆ, ಇದೇ ಹಣವನ್ನು ತನ್ನ ವಾಟ್ಸಾಪ್ ಸಂದೇಶಗಳ ಮೂಲಕ ಹೊಂಬಳ ಅವರಿಗೆ ಸೂಚನೆ ನೀಡಿ, ತನ್ನ ಸಹಚರರಾದ ಚೈತ್ರಾ ಮುಂಡಳ್ಳಿ (A2), ಇಕ್ಬಾಲ್ ಕೊಟ್ಟೂರು (A3), ಜಗನ್ನಾಥ ಮುಲ್ಲಾಲ್ (A4), ಅಶೋಕ್ ಕುಂಬಾರ್ (A5), ಮುತ್ತಪ್ಪ ಬಳಿಗಾರ್ (A6) ಹಾಗೂ ಶಂಶಾದ್ ಎಂ (A7) ಅವರ ಬ್ಯಾಂಕ್ ಖಾತೆಗಳಿಗೆ ವಾಪಸ್ ವರ್ಗಾಯಿಸಿಕೊಳ್ಳುವ ಮೂಲಕ ‘ವೃತ್ತಾಕಾರದ ಹಣ ವರ್ಗಾವಣೆ’ (Circular Money Transfer) ದೃಶ್ಯ ಸೃಷ್ಟಿಸಿದ್ದಾನೆ.

ಅಧಿಕಾರಿಗಳ ಕಣ್ಣಿಗೆ ಮಣ್ಣು: ಈ ಮೂಲಕ ಹೊಂಬಳ ಅವರಿಗೆ ಸೈಟಿನ ಹಣ ಪಾವತಿಯಾಗಿದೆ ಎಂದು ತೋರಿಸಿ, ಗದಗ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ 2026 ರ ಜನವರಿ 16 ರಂದು ಎಲ್ಲಾ 11 ಪ್ಲಾಟ್ಗಳನ್ನು ತನ್ನ ಹೆಸರಿಗೆ ನಕಲಿ ಮಾರಾಟ ಪತ್ರದ (Sale Deed) ಮೂಲಕ ನೋಂದಣಿ ಮಾಡಿಸಿಕೊಂಡು ವಂಚಿಸಿದ್ದಾನೆ. ವಾಸ್ತವವಾಗಿ ಹೊಂಬಳ ಅವರಿಗೆ ಯಾವುದೇ ಹಣ ತಲುಪದೇ, ಸೈಟುಗಳೂ ಕೈತಪ್ಪಿ ಹೋಗಿವೆ.
ಕೋರ್ಟ್ ಮೆಟ್ಟಿಲೇರಿ ಮತ್ತೊಂದು ನಾಟಕ!
ಇಷ್ಟಕ್ಕೇ ನಿಲ್ಲದ ಆರೋಪಿ ಸಯ್ಯದ್ ರಶೀದ್, ತಾನು ಮಾಡಿದ ವಂಚನೆ ಹೊರಬರದಂತೆ ತಡೆಯಲು ಗದಗದ ಪ್ರಧಾನ ಸೀನಿಯರ್ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಮೇ 2, 2026 ರಂದು ದಾವೆ (OS/182/2026) ಹೂಡಿ ಕೋರ್ಟ್ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಇಡೀ ವಂಚನೆಯ ಜಾಲವನ್ನು ಮತ್ತೊಬ್ಬ ಆರೋಪಿ ಮೌಲಾಸಾಬ್ ಭಾವಿಕಟ್ಟಿ (A8) ಎಂಬ ರಿಯಲ್ ಎಸ್ಟೇಟ್ ಏಜೆಂಟ್ ಸೂತ್ರಧಾರಿಯಾಗಿ ನಿಂತು ಪ್ರೇರೇಪಿಸಿರುವುದು ಬೆಳಕಿಗೆ ಬಂದಿದೆ.

ತನಿಖೆ ಕೈಗೆತ್ತಿಕೊಂಡ ಗದಗ ಪೊಲೀಸರು
ಸಂತ್ರಸ್ತ ವೃದ್ಧ ಕೃಷಿಕನ ಪರವಾಗಿ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಅಯೂಬ್ ನದ್ದಿಮುಲ್ಲಾ ಪೊಲೀಸರಿಗೆ ದೂರು ನೀಡಿದ್ದಾರೆ. ಭಾರತೀಯ ನ್ಯಾಯ ಸಂಹಿತಾ (BNS), 2023 ರ ಅಡಿಯಲ್ಲಿ ವಂಚನೆ, ನಕಲಿ ದಾಖಲೆ ಸೃಷ್ಟಿ, ಕ್ರಿಮಿನಲ್ ಪಿತೂರಿ ಹಾಗೂ ಸಮಾನ ಉದ್ದೇಶದ ಕಾಯ್ದೆಗಳಾದ ಸೆಕ್ಷನ್ 318(2), 318(4), 336(2), 336(3), 336(4), 322, 61(2) ಮತ್ತು 3(5) ಅಡಿಯಲ್ಲಿ ಗದಗ ಪಟ್ಟಣ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸಂಗಮೇಶ್ ವಿ. ಶಿವಯೋಗಿ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

