ಗದಗ: ಗದಗ ನಗರದಿಂದ ಸಂಜೆ 4.30ಕ್ಕೆ ಕಳಸಾಪುರ ಮಾರ್ಗವಾಗಿ ಸಂಚರಿಸುವ ಬಸ್ನಲ್ಲಿ ಪ್ರತಿದಿನ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ತುಂಬಿ ತುಳುಕುತ್ತಿರುವುದರಿಂದ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕಾಲಿಡಲೂ ಜಾಗ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ವರ್ಷಗಳಿಂದ ಈ ಸಮಸ್ಯೆ ಮುಂದುವರಿದಿದ್ದರೂ, ಸಾರಿಗೆ ಇಲಾಖೆ ಇನ್ನೂ ಶಾಶ್ವತ ಪರಿಹಾರ ಕಲ್ಪಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ಕಪ್ಪತ್ತಗಿರಿ ಫೌಂಡೇಶನ್ ವತಿಯಿಂದ ಈಗಾಗಲೇ ಎರಡು ಬಾರಿ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಂಜೆ ಹೆಚ್ಚುವರಿ ಬಸ್ನ್ನು ಆರಂಭಿಸುವಂತೆ ಒತ್ತಾಯಿಸಲಾಗಿದೆ. ಆದರೂ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಬೆಳಿಗ್ಗೆ 8.30 ಹಾಗೂ 9.30ಕ್ಕೆ ಕಳಸಾಪುರಕ್ಕೆ ಬಸ್ ಸೇವೆ ಲಭ್ಯವಿದ್ದರೂ, ಶಾಲೆ-ಕಾಲೇಜುಗಳು ಮುಗಿಯುವ ವೇಳೆಗೆ ಸಂಜೆ 4.30ಕ್ಕೆ ಒಂದೇ ಬಸ್ ಇರುವುದರಿಂದ ಅದೇ ಬಸ್ನಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಪಾಸ್ ಹೊಂದಿರುವ ಪ್ರಯಾಣಿಕರು ಒಟ್ಟಿಗೆ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಕಳಸಾಪುರ, ನಾಗಾವಿ, ನಾಗಾವಿ ತಾಂಡಾ, ಬೆಳೆದಡಿ ಹಾಗೂ ಬೆಳೆದಡಿ ತಾಂಡಾ ಭಾಗಗಳ ವಿದ್ಯಾರ್ಥಿಗಳು ಇದೇ ಬಸ್ನ್ನು ಅವಲಂಬಿಸಿದ್ದು, ಬಸ್ ತುಂಬಿ ತುಳುಕುವುದರಿಂದ ಅನೇಕ ವಿದ್ಯಾರ್ಥಿಗಳು ಬಸ್ ಹತ್ತಲೂ ಸಾಧ್ಯವಾಗುತ್ತಿಲ್ಲ. ಬಸ್ ನಿರ್ವಾಹಕರಿಗೂ ಪ್ರಯಾಣಿಕರ ದಟ್ಟಣೆಯಿಂದ ಟಿಕೆಟ್ ವಿತರಿಸುವುದೇ ಕಷ್ಟಕರವಾಗಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಸಂಜೆ 5.30ಕ್ಕೆ ಮಹಾಲಿಂಗಪುರ ಬಸ್ ಇದ್ದರೂ, ಶಾಲೆ ಮುಗಿಸಿ ಬಂದ ವಿದ್ಯಾರ್ಥಿಗಳು ಅಷ್ಟರವರೆಗೆ ಬಸ್ ನಿಲ್ದಾಣದಲ್ಲೇ ಕಾಯಬೇಕಾಗುತ್ತದೆ. ಇದು ವಿಶೇಷವಾಗಿ ಬಾಲಕಿಯರು ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಆತಂಕಕಾರಿ ಎಂದು ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ.
ಯಾವುದೇ ಅನಾಹುತ ಸಂಭವಿಸುವ ಮೊದಲು ಸಾರಿಗೆ ಇಲಾಖೆ ತಕ್ಷಣ ಸ್ಪಂದಿಸಿ, ಸಂಜೆ ಕಳಸಾಪುರ ಮಾರ್ಗಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕು. ಇದರಿಂದ ಕಳಸಾಪುರ, ನಾಗಾವಿ, ನಾಗಾವಿ ತಾಂಡಾ, ಬೆಳೆದಡಿ ಹಾಗೂ ಬೆಳೆದಡಿ ತಾಂಡಾ ಭಾಗದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
“ಎರಡು ವರ್ಷಗಳಿಂದ ಮನವಿ ಸಲ್ಲಿಸುತ್ತಲೇ ಇದ್ದೇವೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು. ಏನಾದರೂ ಅನಾಹುತ ಸಂಭವಿಸಿದ ಬಳಿಕ ಕ್ರಮ ಕೈಗೊಳ್ಳುವುದಕ್ಕಿಂತ, ಈಗಲೇ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು” ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

