ಪ್ರತಿಭಾ ಪುರಸ್ಕಾರ, ಪಠ್ಯೇತರ ಚಟುವಟಿಕೆಗಳಿಗೆ ಚಾಲನೆ
ಗಜೇಂದ್ರಗಡ, ಆ. 3: ಸ್ಥಳೀಯ ಎಸ್. ಎಮ್. ಭೂಮರಡ್ಡಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ, ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಗ.ವಿ.ವಿ. ಸಂಘದ ಸಭಾಭವನದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ.ವಿ.ವಿ. ಸಂಘದ ಉಪಾಧ್ಯಕ್ಷರು ಹಾಗೂ ಗಜೇಂದ್ರಗಡದ ಖ್ಯಾತ ವೈದ್ಯರಾದ ಡಾ. ಬಿ. ವ್ಹಿ. ಕಂಬಳ್ಯಾಳ್ ಅವರು, ಇಂದಿನ ಪೈಪೋಟಿಯ ಯುಗದಲ್ಲಿ ವಿದ್ಯಾರ್ಥಿಗಳು ಒಂದೇ ಕ್ಷೇತ್ರಕ್ಕೆ ಸೀಮಿತವಾಗದೆ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಲಭ್ಯವಿರುವ ಅವಕಾಶಗಳನ್ನು ಗುರುತಿಸಿ ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸಾಧನೆಯತ್ತ ಮುನ್ನಡೆಯಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿಪ್ಪಾಣಿ ಕೆ.ಎಲ್.ಇ. ಸಂಸ್ಥೆಯ ಬಿ.ಎಡ್. ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ. ಬಿ. ಪೊಲೀಸ್ ಪಾಟೀಲ ಅವರು, ಪಿಯುಸಿ ಹಂತವು ವಿದ್ಯಾರ್ಥಿಗಳ ಜೀವನದ ಅತ್ಯಂತ ಮಹತ್ವದ ಘಟ್ಟವಾಗಿದೆ. ಪೋಷಕರ ಕಷ್ಟ-ತ್ಯಾಗಗಳನ್ನು ಸದಾ ನೆನಪಿನಲ್ಲಿಟ್ಟುಕೊಂಡು ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಂಡು ಅವರ ಕನಸುಗಳನ್ನು ನನಸು ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಜಿ. ಬಿ. ಗುಡಿಮನಿ ವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ವಿವಿಧ ಪಠ್ಯೇತರ ಚಟುವಟಿಕೆಗಳಿಗೆ ಅಧಿಕೃತ ಚಾಲನೆ ನೀಡಲಾಯಿತು.
ವೇದಿಕೆಯಲ್ಲಿ ಎಸ್. ಎಂ. ಭೂಮರಡ್ಡಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್. ಎನ್. ಶಿವರಡ್ಡಿ, ಉಪನ್ಯಾಸಕರಾದ ಬಿ. ವ್ಹಿ. ಮುನವಳ್ಳಿ, ಎ. ಎಸ್. ವಡ್ಡರ, ವಿ. ಎಂ. ಜೂಚನಿ ಹಾಗೂ ವಿದ್ಯಾರ್ಥಿ ಕಾರ್ಯದರ್ಶಿಗಳಾದ ಕುಮಾರಿ ಬಸಮ್ಮ ಮಲ್ಲಾಡದ ಮತ್ತು ಕುಮಾರ ಬಸವರಾಜ ಮಲ್ಲಾಡದ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಎಂ. ಎಲ್. ಕ್ವಾಟಿ ಹಾಗೂ ಪ್ರೇಮಾ ಚುಂಚಾ ಕಾರ್ಯಕ್ರಮ ನಿರೂಪಿಸಿದರು. ಎಸ್. ಎಸ್. ವಾಲಿಕಾರ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

