ಆಲಮೇಲ, ಆ.6: ಪಟ್ಟಣದ ವಿಶ್ವೇಶ್ವರ ಬಾಲಭಾರತಿ ಶಾಲೆಯಲ್ಲಿ ಕಾನೂನು ಅರಿವು ಹಾಗೂ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮವನ್ನು ಆಲಮೇಲ ಪೊಲೀಸ್ ಠಾಣೆಯ ಪಿಎಸ್ಐ ಅರವಿಂದ ಅಂಗಡಿ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ರಸ್ತೆ ಸುರಕ್ಷತಾ ನಿಯಮಗಳು, ಮಕ್ಕಳ ಹಕ್ಕುಗಳು ಹಾಗೂ ವಿವಿಧ ಕಾನೂನುಗಳ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು.
ಮನೆಯಿಂದ ಹೊರಗಡೆ ಹೋಗುವಾಗ ಎಚ್ಚರಿಕೆ ವಹಿಸುವುದು, ಗುಡ್ ಟಚ್ ಹಾಗೂ ಬ್ಯಾಡ್ ಟಚ್ ಬಗ್ಗೆ ಅರಿತುಕೊಳ್ಳುವುದು ಮತ್ತು ಯಾವುದೇ ಅಹಿತಕರ ಅನುಭವ ಎದುರಾದರೆ ತಕ್ಷಣವೇ ಪೋಷಕರು ಅಥವಾ ಶಿಕ್ಷಕರಿಗೆ ಮಾಹಿತಿ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮೊಬೈಲ್ ಫೋನ್ಗಳನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಬಳಸಬೇಕು. ಡಿಜಿಟಲ್ ಅರೆಸ್ಟ್ ಸೇರಿದಂತೆ ಸೈಬರ್ ವಂಚನೆಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದ ಅವರು, ಪ್ರತಿಯೊಬ್ಬ ಮಗುವಿಗೂ ಕಡ್ಡಾಯ ಶಿಕ್ಷಣ ದೊರೆಯಬೇಕು. ಮಕ್ಕಳನ್ನು ಶಾಲೆಯಿಂದ ಹೊರಗಿಟ್ಟು ಬಾಲಕಾರ್ಮಿಕರನ್ನಾಗಿ ದುಡಿಸುವುದು ಕಾನೂನುಬಾಹಿರವಾಗಿದ್ದು, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಬಾಲ್ಯ ವಿವಾಹವು ಸಂಪೂರ್ಣ ನಿಷೇಧಿತವಾಗಿದ್ದು, ಇಂತಹ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ ಅವರು, ಶಾಲಾ ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಶಾಲಾ ಆವರಣದಲ್ಲಿ ಪ್ರತಿದಿನ ಸಂಜೆ ಪೊಲೀಸ್ ಇಲಾಖೆಯಿಂದ ಗಸ್ತು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಆರೂಢ ಮಠದ ಪೂಜ್ಯ ಬಸವಲಿಂಗ ಶರಣರು ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಎಸ್.ಐ. ಜೋಗೂರ ಅಧ್ಯಕ್ಷತೆ ವಹಿಸಿದ್ದರು. ಆಲಮೇಲ ಗೆಳೆಯರ ಬಳಗದ ಮುಖ್ಯಸ್ಥ ಪ್ರಕಾಶ ಮಾಡ್ಯಾಳ, ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರಣಳ್ಳಿ ಹಾಗೂ ಶಿಕ್ಷಕರಾದ ಚಂದ್ರಕಾಂತ ದೇವರಮನಿ, ಪ್ರಶಾಂತ ಗಡದೆ, ಲಕ್ಷ್ಮೀಬಾಯಿ ಹಳೇಮನಿ, ಸುವರ್ಣ ಸಾರಂಗಮಠ, ಸೀತಾ ಆರೇಶಂಕರ, ಸರುಬಾಯಿ ಬಂಡಗಾರ, ಸುನೀತಾ ಗುಂಡದ, ಐಶ್ವರ್ಯ ಬೇಪಾರಿ, ಅಂಜಲಿ ಕನ್ನೊಳ್ಳಿ ಸೇರಿದಂತೆ ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


