ಶ್ರೀಗಳ ಆಶೀರ್ವಾದ ಪಡೆದು ಸದನದ ಘನತೆ, ಸಂವಿಧಾನದ ಆಶಯ ಎತ್ತಿಹಿಡಿಯುವ ಸಂಕಲ್ಪ
ಗದಗವಾಣಿ ಸುದ್ದಿಮೂಲ
ಕುಕನೂರು: ಕರ್ನಾಟಕ ವಿಧಾನಸಭೆಯ ನೂತನ ಸ್ಪೀಕರ್ ಆಗಿ ನೇಮಕಗೊಂಡಿರುವ ಜಿ.ಎಸ್. ಪಾಟೀಲ್ ಅವರು ಶನಿವಾರ ಕುದರಿಮೋತಿ ಗ್ರಾಮದ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠಕ್ಕೆ ಭೇಟಿ ನೀಡಿ, ಜಗದ್ಗುರು ವಿಜಯ ಮಹಾಂತ ಮಹಾಸ್ವಾಮಿಗಳ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಿದರು.

ನೂತನ ಜವಾಬ್ದಾರಿ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಶ್ರೀಮಠಕ್ಕೆ ಆಗಮಿಸಿದ ಸ್ಪೀಕರ್ ಅವರನ್ನು ಮಠದ ಭಕ್ತರು ಹಾಗೂ ಗ್ರಾಮಸ್ಥರು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಶ್ರೀ ನಿ.ಪ್ರ.ಸ್ವ. ಜಗದ್ಗುರು ವಿಜಯ ಮಹಾಂತ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಕೆಲಕಾಲ ಉಪಸ್ಥಿತರಿದ್ದು, ಮಠದ ಧಾರ್ಮಿಕ ಪರಂಪರೆ ಹಾಗೂ ಸಮಾಜಮುಖಿ ಸೇವಾ ಕಾರ್ಯಗಳ ಕುರಿತು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಜಗದ್ಗುರು ವಿಜಯ ಮಹಾಂತ ಮಹಾಸ್ವಾಮಿಗಳು, “ಜೆ.ಎಸ್. ಪಾಟೀಲ್ ಅವರು ಶ್ರೀಮಠದೊಂದಿಗೆ ಹಿಂದಿನಿಂದಲೂ ಆತ್ಮೀಯ ಸಂಬಂಧ ಹೊಂದಿದ್ದು, ಮಠದ ಮೇಲೆ ಅಪಾರ ಗೌರವ ಮತ್ತು ಭಕ್ತಿಭಾವ ಹೊಂದಿದ್ದಾರೆ. ಅವರಿಗೆ ಶ್ರೀಮಠದ ಆಶೀರ್ವಾದ ಸದಾ ಇರಲಿ. ರಾಜ್ಯದ ಅತ್ಯುನ್ನತ ಪ್ರಜಾಪ್ರಭುತ್ವದ ವೇದಿಕೆಯಾದ ವಿಧಾನಸಭೆಯ ಸ್ಪೀಕರ್ ಸ್ಥಾನವನ್ನು ಯಶಸ್ವಿಯಾಗಿ ನಿರ್ವಹಿಸಿ, ಜನರ ಆಶೋತ್ತರಗಳಿಗೆ ಸ್ಪಂದಿಸುವಂತಾಗಲಿ” ಎಂದು ಹಾರೈಸಿದರು.
ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸುವೆ
ಶ್ರೀಗಳ ಆಶೀರ್ವಾದ ಸ್ವೀಕರಿಸಿದ ಬಳಿಕ ಮಾತನಾಡಿದ ವಿಧಾನಸಭೆ ಸ್ಪೀಕರ್ ಜೆ.ಎಸ್. ಪಾಟೀಲ್, “ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠಕ್ಕೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆಯುತ್ತಿರುವುದು ನನಗೆ ಸಂತೋಷದ ಹಾಗೂ ಪುಣ್ಯದ ಕ್ಷಣ. ಶ್ರೀಮಠದ ಮೇಲೆ ನನಗೆ ಅಪಾರ ಗೌರವ ಮತ್ತು ಭಕ್ತಿ ಇದೆ. ಶ್ರೀಗಳ ಮಾರ್ಗದರ್ಶನ ಹಾಗೂ ಆಶೀರ್ವಾದವನ್ನು ಸದಾ ಗೌರವದಿಂದ ಸ್ವೀಕರಿಸುತ್ತೇನೆ” ಎಂದರು.

“ವಿಧಾನಸಭೆಯ ಸ್ಪೀಕರ್ ಆಗಿ ದೊರೆತಿರುವ ಜವಾಬ್ದಾರಿಯನ್ನು ನಿಷ್ಪಕ್ಷಪಾತವಾಗಿ ಮತ್ತು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಿರ್ವಹಿಸುವುದು ನನ್ನ ಪ್ರಮುಖ ಆದ್ಯತೆ. ಸದನದ ಪ್ರತಿಯೊಬ್ಬ ಸದಸ್ಯರಿಗೂ ಸಮಾನ ಅವಕಾಶ ಕಲ್ಪಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುತ್ತೇನೆ. ವಿಧಾನಸಭೆಯ ಗೌರವ, ಘನತೆ ಮತ್ತು ಸಂಸದೀಯ ಪರಂಪರೆಯನ್ನು ಕಾಪಾಡಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ. ರಾಜ್ಯದ ಜನರ ಆಶೋತ್ತರಗಳಿಗೆ ಸದನದ ಮೂಲಕ ಸಮರ್ಥವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವೆ” ಎಂದು ಹೇಳಿದರು.
ಸ್ಪೀಕರ್ ಆಗಿ ನೇಮಕಗೊಂಡ ಜೆ.ಎಸ್. ಪಾಟೀಲ್ ಅವರಿಗೆ ಶ್ರೀಗಳ ಆಶೀರ್ವಾದ ದೊರೆತ ಹಿನ್ನೆಲೆಯಲ್ಲಿ ಮಠದ ಭಕ್ತರು ಹಾಗೂ ಸ್ಥಳೀಯ ಮುಖಂಡರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾಮದ ದಳಪತಿ ಹನಮಗೌಡ ಪೊ. ಪಾಟೀಲ್, ಮಾಜಿ ಜಿ.ಪಂ. ಸದಸ್ಯ ಅಶೋಕ ತೋಟದ್, ಬಸಪ್ಪ ದೊಡ್ಡಮನಿ, ಮುದಕಪ್ಪ ರಾವಣಿಕಿ, ಮಂಜುನಾಥ ಗಟ್ಟೆಪ್ಪನವರ, ಅಮರೇಶ ತಲ್ಲೂರು, ಸುಭಾಷ್ ಈಡಿಗೇರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಫರೀದಾಬೇಗಂ, ಬಸವರಾಜ ಗಟ್ಟೆಪ್ಪನವರ, ಮಹಾಂತಪ್ಪ ಸಿಡ್ನಾಳಿ, ಮಾಬುಸಾಬ ಮಕಾಂದರ್, ಡಾ. ಹುಸೇನಬಾಷ, ಮಂಜುನಾಥ ಸಜ್ಜನ್, ರವಿ ಕಟ್ಟಗಿ, ನಾಗಪ್ಪ ತಲ್ಲೂರು, ಹಾಸೀಮಸಾಬ ಮಕಾಂದರ್, ರವೀಂದ್ರ ಈಡಿಗೇರ, ಶಿವಪ್ಪ ಬೇವಿನಗಿಡದ್, ಅಶೋಕ ಗಟ್ಟೆಪ್ಪನವರ, ಶ್ರೀಕಾಂತ್ ಸಜ್ಜನ್, ದೇವಪ್ಪ ಕಾಳಿ, ಮರಿಯಪ್ಪ ಕೆಂಗಾರ್, ಈರಪ್ಪ ಕಾಳಿ ಸೇರಿದಂತೆ ಮಠದ ಭಕ್ತರು, ಗಣ್ಯರು ಹಾಗೂ ವಿವಿಧ ಮುಖಂಡರು ಉಪಸ್ಥಿತರಿದ್ದರು.
ವರದಿ: ಕೆ.ಎಂ.ಶರಣಯ್ಯಸ್ವಾಮಿ

