ಇಂಡಿ, ಜೂನ್ 18: ವಿಜಯಪುರ ಜಿಲ್ಲೆಯ ರಾಜಕೀಯ ಸಮತೋಲನ ಹಾಗೂ ಪ್ರಾದೇಶಿಕ ನ್ಯಾಯದ ದೃಷ್ಟಿಯಿಂದ ಇಂಡಿ ವಿಧಾನಸಭಾ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಯುವ ಮುಖಂಡ ಗಜಾನಂದ ಸಾಳುಂಕೆ ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿಜಯಪುರ ಜಿಲ್ಲೆಯಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಇಂಡಿ ಕ್ಷೇತ್ರವನ್ನು ಹೊರತುಪಡಿಸಿ ಉಳಿದ ಬಹುತೇಕ ಕ್ಷೇತ್ರಗಳಿಗೆ ವಿವಿಧ ಅವಧಿಗಳಲ್ಲಿ ಸಚಿವ ಸ್ಥಾನ ದೊರೆತಿದೆ. ಆದರೆ ಜಿಲ್ಲೆಯ ರಾಜಕೀಯವಾಗಿ ಮಹತ್ವದ ಕ್ಷೇತ್ರವಾಗಿರುವ ಇಂಡಿಗೆ ಮಾತ್ರ ಈ ಅವಕಾಶ ಸಿಗದೇ ಇರುವುದು ಸ್ಥಳೀಯ ಜನತೆಯಲ್ಲಿ ನಿರಾಸೆ ಮೂಡಿಸಿದೆ ಎಂದು ಹೇಳಿದ್ದಾರೆ.

ಜಿಲ್ಲೆಯ ಅಭಿವೃದ್ಧಿ, ಆಡಳಿತಾತ್ಮಕ ಸಮತೋಲನ ಹಾಗೂ ಪಕ್ಷದ ಬಲವರ್ಧನೆ ದೃಷ್ಟಿಯಿಂದ ಈ ಬಾರಿ ಇಂಡಿ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡುವುದು ಅತ್ಯಗತ್ಯವಾಗಿದೆ. ಶಾಸಕ ಯಶವಂತರಾಯಗೌಡ ಪಾಟೀಲ ಅವರು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜನನಾಯಕರೆಂಬ ಹೆಗ್ಗಳಿಕೆಯನ್ನು ಗಳಿಸಿದ್ದಾರೆ. ಅವರ ಸರಳತೆ, ಸಂಘಟನಾ ಕೌಶಲ್ಯ ಹಾಗೂ ಪಕ್ಷದ ಮೇಲಿನ ಬದ್ಧತೆ ಅವರನ್ನು ಸಚಿವ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯನ್ನಾಗಿಸಿದೆ ಎಂದು ಸಾಳುಂಕೆ ಅಭಿಪ್ರಾಯಪಟ್ಟಿದ್ದಾರೆ.
ಇಂಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಬಲವಾಗಿದ್ದು, ಪಕ್ಷದ ತತ್ವ-ಸಿದ್ಧಾಂತಗಳನ್ನು ಗ್ರಾಮೀಣ ಮಟ್ಟದವರೆಗೂ ತಲುಪಿಸುವಲ್ಲಿ ಯಶವಂತರಾಯಗೌಡ ಪಾಟೀಲ ಅವರ ಪಾತ್ರ ಮಹತ್ವದ್ದಾಗಿದೆ. ಅವರಿಗೆ ಸಚಿವ ಸ್ಥಾನ ದೊರೆತರೆ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಇನ್ನಷ್ಟು ಬಲಗೊಳ್ಳಲಿದ್ದು, ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ಗೆ ಹೆಚ್ಚಿನ ರಾಜಕೀಯ ಲಾಭವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಇಂಡಿಯಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಆಗಿನ ವಿರೋಧ ಪಕ್ಷದ ನಾಯಕ ಹಾಗೂ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕ ವೇದಿಕೆಯಲ್ಲಿ ಕ್ಷೇತ್ರದ ಜನರ ಅಭಿವೃದ್ಧಿಗೆ ಅಗತ್ಯ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದರು. ಜೊತೆಗೆ ಪಕ್ಷದ ಹಿರಿಯ ನಾಯಕರ ಮಟ್ಟದಲ್ಲಿಯೂ ಇಂಡಿ ಕ್ಷೇತ್ರಕ್ಕೆ ಸೂಕ್ತ ಸ್ಥಾನಮಾನ ನೀಡುವ ಕುರಿತು ಚರ್ಚೆಗಳು ನಡೆದಿದ್ದವು ಎಂಬುದನ್ನು ಸಾಳುಂಕೆ ಸ್ಮರಿಸಿದ್ದಾರೆ.
ಇಂಡಿ ಕ್ಷೇತ್ರದ ಜನತೆ ಹಲವು ವರ್ಷಗಳಿಂದ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದು, ಈ ಬಾರಿ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಕ್ಷೇತ್ರದ ಆಶಯಕ್ಕೆ ಸ್ಪಂದಿಸಿ ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಪಕ್ಷವು ತನ್ನ ಬದ್ಧತೆಯನ್ನು ಸಾಬೀತುಪಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಿ, ಜಿಲ್ಲೆಯಲ್ಲಿ ಸಮಾನ ರಾಜಕೀಯ ಪ್ರತಿನಿಧಿತ್ವವನ್ನು ಖಚಿತಪಡಿಸುವ ನಿಟ್ಟಿನಲ್ಲಿ ಇಂಡಿಗೆ ಸಚಿವ ಸ್ಥಾನ ನೀಡುವುದು ಕಾಲದ ಅಗತ್ಯವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ನಾಯಕತ್ವವು ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಕ್ಷೇತ್ರದ ಜನರ ಆಶಯಕ್ಕೆ ನ್ಯಾಯ ಒದಗಿಸಬೇಕು ಎಂದು ಗಜಾನಂದ ಸಾಳುಂಕೆ ಆಗ್ರಹಿಸಿದ್ದಾರೆ.

