ಶಿಕ್ಷಣದ ಜೊತೆಗೆ ಧರ್ಮ ಸಂಸ್ಕಾರವೂ ಅಗತ್ಯ : ಡಾ.ಸುಜ್ಞಾನದೇವ ಶ್ರೀ
ಗದಗ, ಮೇ.೧೭: ಮಕ್ಕಳಿಗೆ ಉತ್ತಮ ಶಿಕ್ಷಣ ಎಷ್ಟು ಅಗತ್ಯವೋ, ಧರ್ಮ ಸಂಸ್ಕಾರ ಮತ್ತು ಭಾರತೀಯ ಸಂಸ್ಕೃತಿಯ ಅರಿವು ಕೂಡ ಅಷ್ಟೇ ಮುಖ್ಯವಾಗಿದೆ ಎಂದು ಬನ್ನಿಕೊಪ್ಪ ಮೈಸೂರು ಅರಮನೆ ಜಪದ ಕಟ್ಟೆಮಠದ ಡಾ.ಸುಜ್ಞಾನದೇವ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ನಗರದ ವಿವೇಕಾನಂದ ನಗರದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಭವನದಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ಜೀವನ ದರ್ಶನ ಪ್ರವಚನ ಮಾಲಿಕೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಧರ್ಮವು ಮನುಷ್ಯನನ್ನು ಸತ್ಯ, ಪ್ರಾಮಾಣಿಕತೆ ಹಾಗೂ ಸಂಸ್ಕಾರದ ಹಾದಿಯಲ್ಲಿ ಮುನ್ನಡೆಸುತ್ತದೆ. ಉತ್ತಮ ವಿದ್ಯಾಭ್ಯಾಸ ಮತ್ತು ಸಂಸ್ಕಾರಯುತ ಬದುಕು ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಿದ್ದು, ಪಾಲಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನೂ ನೀಡಬೇಕೆಂದು ಹೇಳಿದರು.
ಯುವಕರು ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಜೀವನ ಮೌಲ್ಯಗಳ ಅರಿವು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿ ತಿಂಗಳು ಜೀವನ ದರ್ಶನ ಕಾರ್ಯಕ್ರಮ ಆಯೋಜಿಸುತ್ತಿರುವ ಸಮಿತಿಯ ಕಾರ್ಯ ಶ್ಲಾಘನೀಯ ಎಂದರು.
ಇಂದಿನ ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಭೂಮಿಯ ಫಲವತ್ತತೆ ಹಾಳಾಗುತ್ತಿದೆ. ಇದರಿಂದ ಮಾನವ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ. ಆದ್ದರಿಂದ ಪಾರಂಪರಿಕ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷ ಎ.ಟಿ.ನರೇಗಲ್ಲ ಮಾತನಾಡಿ, ಅಮಾವಾಸ್ಯೆ ದಿನದಂದು ಆಯೋಜಿಸುತ್ತಿರುವ ಜೀವನ ದರ್ಶನ ಪ್ರವಚನ ಮಾಲಿಕೆ ಕಳೆದ ೫೮ ತಿಂಗಳಿಂದ ನಿರಂತರವಾಗಿ ನಡೆಯುತ್ತಿದ್ದು, ಸಮಾಜದಲ್ಲಿ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ ಎಂದರು.
“ವೃದ್ಧಾಪ್ಯದಲ್ಲಿ ಆರೋಗ್ಯ ಸಂರಕ್ಷಣೆ” ವಿಷಯವಾಗಿ ಉಪನ್ಯಾಸ ನೀಡಿದ ನಿವೃತ್ತ ಪ್ರಾಚಾರ್ಯ ಡಾ.ಉಮೇಶ ಪುರದ, ಆರೋಗ್ಯವೇ ನಿಜವಾದ ಸಂಪತ್ತು. ನಿಯಮಿತ ಆರೋಗ್ಯ ತಪಾಸಣೆ, ಯೋಗ, ಧ್ಯಾನ, ವಾಯುವಿಹಾರ ಹಾಗೂ ಸಾಂಪ್ರದಾಯಿಕ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದು ಅಗತ್ಯ ಎಂದರು.
ಪ್ರತಿಭಾ ಪುರಸ್ಕಾರ
ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಭೂಮಿಕಾ ರವಿ ಖೋಡೆ, ಗೌತಮ ಸತೀಶ ಚೂರಿ, ಶಶಾಂಕ ಶಿವಕುಮಾರ ಕುರಿಯವರ, ಶ್ರೇಯಸ್ ಬಸವರಾಜ ರಾಜಪೂರ, ಪ್ರತೀಕ್ಷಾ ಮಲ್ಲಿಕಾರ್ಜುನ ಉಪ್ಪಿನ ಹಾಗೂ ಜ್ಯೋತಿಕಾ ಮಹಾಂತೇಶ ಮಸ್ಕಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಶಿಕ್ಷಕ ಎನ್.ವ್ಹಿ.ಪಾಟೀಲ, ಕಾರ್ಯದರ್ಶಿ ಕೆ.ಪಿ.ಗುಳಗೌಡರ, ಕೋಶಾಧ್ಯಕ್ಷ ಎಸ್.ಎಸ್.ಪಾಳೇಗಾರ ಹಾಗೂ ಬಿಎಸ್ಎನ್ಎಲ್ ನಿವೃತ್ತ ನೌಕರರಾದ ಶ್ರೀಮತಿ ನಿರ್ಮಲಾ ಪಾಟೀಲ ಅವರನ್ನು ಗೌರವಿಸಲಾಯಿತು.
ಚಿಂತಕ ವಸಂತಗೌಡ ಪೋಲೀಸ್ಪಾಟೀಲ ಅವರು ಮೇ ೩೧ರಂದು ನಡೆಯಲಿರುವ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸುದರ್ಶನ ಹಾನಗಲ್ಲ, ಆರ್.ಬಿ.ಅಂದಪ್ಪನವರ, ವ್ಹಿ.ಆರ್.ಗೊಬ್ಬರಗುಂಪಿ, ಸಾಗರ ಬಿಂಗಿ, ಬಿ.ಎನ್.ಯರನಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.

