ಗದಗವಾಣಿ ಸುದ್ದಿಮೂಲ|
ಗದಗ: ತಾಲೂಕಿನ ಬಳಗಾನೂರ–ಕದಡಿ ಗ್ರಾಮದ ಸಮೀಪದಲ್ಲಿರುವ ಶ್ರೀ ಕೊರಮ್ಮದೇವಿ ದೇವಸ್ಥಾನದಲ್ಲಿ ಮಳೆಗಾಗಿ ಪ್ರಾರ್ಥಿಸಿ ಮಂಗಳವಾರ ಭಕ್ತಿಭಾವದಿಂದ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.

ಮಳೆ ಕೊರತೆಯಿಂದ ರೈತಾಪಿ ವರ್ಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ, ನಾಡಿನ ನೆಲ-ಜಲ ಸಮೃದ್ಧಿಯಾಗಲಿ, ಉತ್ತಮ ಮಳೆಯಾಗಲಿ, ರೈತರ ಹೊಲ-ಗದ್ದೆಗಳಲ್ಲಿ ಹಸಿರು ಚಿಗುರೊಡೆಯಲಿ ಎಂಬ ಸಂಕಲ್ಪದೊಂದಿಗೆ ಶ್ರೀ ಕೊರಮ್ಮದೇವಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ವಿವಿಧ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು.
ದೇವಸ್ಥಾನದ ಆವರಣದಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡು, ಸಕಾಲದಲ್ಲಿ ಸಮೃದ್ಧ ಮಳೆಯಾಗಿ ಕೃಷಿ ಚಟುವಟಿಕೆಗಳು ಚುರುಕುಗೊಳ್ಳಲಿ, ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗದಿರಲಿ ಹಾಗೂ ಸರ್ವರಿಗೂ ಸುಭಿಕ್ಷ, ಶಾಂತಿ, ನೆಮ್ಮದಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಪೂಜಾ ಕಾರ್ಯಕ್ರಮದ ಬಳಿಕ ಭಕ್ತರು ಹಾಗೂ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಧಾರ್ಮಿಕ ಭಾವನೆಯೊಂದಿಗೆ ನಡೆದ ಅನ್ನಸಂತರ್ಪಣೆಯಲ್ಲಿ ಅನೇಕರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಗ್ರಾಮೀಣ ಬದುಕಿನಲ್ಲಿ ಮಳೆ ಹಾಗೂ ಕೃಷಿಗೆ ಅವಿನಾಭಾವ ಸಂಬಂಧವಿದ್ದು, ಉತ್ತಮ ಮಳೆಗಾಗಿ ದೇವರ ಮೊರೆ ಹೋಗುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಧಾರ್ಮಿಕ ಪರಂಪರೆಯಾಗಿದೆ. ಇದೇ ನಂಬಿಕೆ ಹಾಗೂ ಭಕ್ತಿಭಾವದೊಂದಿಗೆ ನಡೆದ ಕೊರಮ್ಮದೇವಿಯ ವಿಶೇಷ ಪೂಜೆ ಗ್ರಾಮಸ್ಥರಲ್ಲಿ ಆತ್ಮಸ್ಥೈರ್ಯ ಮತ್ತು ಆಶಾಭಾವ ಮೂಡಿಸಿತು.
ಈ ಸಂದರ್ಭದಲ್ಲಿ ಭಕ್ತರಾದ ಸುರೇಶ ಕಟ್ಟಿಮನಿ, ಬೂದಪ್ಪ ಅಳಗವಾಡಿ, ಉಮೇಶ ಮಡಿವಾಳರ, ಶಿವಾನಗಂದ ಚೆಟ್ರಿ, ಮಹಾದೇವ ಹೊಂಬಳ, ರವಿಕುಮಾರ್ ಹಿರೇಮಠ, ಶಿವಕುಮಾರ ಹಿರೇಮಠ, ಮಂಜುನಾಥ ರೋಣದಮಠ, ಶಿವಕುಮಾರ ಚವ್ಹಾಣ, ಗವಿಸಿದ್ದ ಹಡಪದ, ಮುತ್ತಪ್ಪ ಅಳಗವಾಡಿ ಸೇರಿದಂತೆ ಶ್ರೀ ಸಂಗಮೇಶ್ವರ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಭಜನಾ ಮಂಡಳಿಯ ಸದಸ್ಯರು ಭಜನೆ ಹಾಗೂ ದೇವರ ನಾಮಸ್ಮರಣೆಯಲ್ಲಿ ಪಾಲ್ಗೊಂಡು ಧಾರ್ಮಿಕ ವಾತಾವರಣಕ್ಕೆ ಮತ್ತಷ್ಟು ಮೆರುಗು ನೀಡಿದರು.


