ಗದಗವಾಣಿ ಸುದ್ದಿಮೂಲ
ಗಜೇಂದ್ರಗಡ, ಆ.7: ಸಮಾಜದ ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಸಬಲೀಕರಣದ ಉದ್ದೇಶದಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ತಾಲೂಕು, ಯುವ ಹಾಗೂ ಮಹಿಳಾ ಘಟಕಗಳ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಆಗಸ್ಟ್ 9ರಂದು ಗಜೇಂದ್ರಗಡದ ಮೈಸೂರ ಮಠದಲ್ಲಿ ಆಯೋಜಿಸಲಾಗಿದೆ ಎಂದು ಮಹಾಸಭಾದ ತಾಲೂಕು ಅಧ್ಯಕ್ಷ ಪ್ರಭು ಚವಡಿ ತಿಳಿಸಿದರು.

ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಎಲ್ಲ ವರ್ಗಗಳನ್ನು ಸಂಘಟಿಸಿ ಶಿಕ್ಷಣ, ಆರ್ಥಿಕ ಅಭಿವೃದ್ಧಿ ಹಾಗೂ ಸಾಮಾಜಿಕ ಪ್ರಗತಿಗೆ ವೇದಿಕೆ ನಿರ್ಮಿಸುವುದು ಮಹಾಸಭೆಯ ಪ್ರಮುಖ ಗುರಿಯಾಗಿದೆ. ಯಾವುದೇ ಪಕ್ಷದ ಚೌಕಟ್ಟಿಗೆ ಸೀಮಿತವಾಗದೆ ಸಮಾಜದ ಹಿತಾಸಕ್ತಿಗಾಗಿ ಸಂಘಟನೆ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚಿನ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ತಾಲೂಕು ಯುವ ಘಟಕದ ಅಧ್ಯಕ್ಷ ಶಿವಕುಮಾರ ಶಶಿಮಠ ಮಾತನಾಡಿ, ಕಾರ್ಯಕ್ರಮವನ್ನು ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಘಟಕದ ಅಧ್ಯಕ್ಷ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ವಿಜಯಕುಮಾರ ಪಾಟೀಲ ಉದ್ಘಾಟಿಸಲಿದ್ದಾರೆ. ಮೈಸೂರ ಮಠದ ವಿಜಯ ಮಹಾಂತ ಸ್ವಾಮೀಜಿ ಹಾಗೂ ನಿಡಗುಂದಿ ಕೊಪ್ಪದ ಚನ್ನಬಸವ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಅಮರೇಗೌಡ ಬಯ್ಯಾಪುರ, ಕವಿತಾ ಜಾಲಿಹಾಳ, ಜಿಲ್ಲಾಧ್ಯಕ್ಷ ಶರಣಬಸಪ್ಪ ಎಸ್. ಗುಡಿಮನಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ರೇವಡಿ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಎಸ್. ವಾಲಿ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಬಸಪ್ಪ ಪ್ರಶಸ್ತಿ ಪುರಸ್ಕೃತ ಎಸ್.ಎಸ್. ಪಾಟೀಲ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಶಂಕರಣ್ಣ ಮುನವಳ್ಳಿ, ರಾಜ್ಯ ಉಪಾಧ್ಯಕ್ಷ ಮಿಥುನ ಪಾಟೀಲ, ರಾಷ್ಟ್ರೀಯ ಮಹಿಳಾ ಘಟಕದ ಕೋಶಾಧ್ಯಕ್ಷೆ ಸಂಯುಕ್ತ ಬಂಡಿ ಹಾಗೂ ವೈದ್ಯ ಚೇತನ ಪ್ರಶಸ್ತಿ ಪುರಸ್ಕೃತ ಡಾ. ಪಾರ್ವತಿಬಾಯಿ ಚವಡಿ ಸೇರಿದಂತೆ ಹಲವು ಗಣ್ಯರನ್ನು ಸನ್ಮಾನಿಸಲಾಗುವುದು ಎಂದು ಮಹಾಸಭಾ ಪದಾಧಿಕಾರಿಗಳು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಶೀಲವಂತ, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ವಾಲಿ, ಶರಣಪ್ಪ ರೇವಡಿ, ಅಮರೇಶ ಗೌರಿಮಠ, ಅವಿನಾಶ ಕೊಟಗಿ, ವಿಶ್ವನಾಥ ಕುಷ್ಟಗಿ, ಬಸವರಾಜ ಚನ್ನಿ, ಹುಚ್ಚಪ್ಪ ಹಾವೇರಿ, ಚಂದ್ರಶೇಖರ ಚಳಿಗೇರಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

