ವರದಿ: ಮುತ್ತಣ್ಣ ಭರಡಿ
ಗದಗ: ಕಳ್ಳತನ, ವಂಚನೆ ಹಾಗೂ ಮೊಬೈಲ್ ಕಳವು ಪ್ರಕರಣಗಳಲ್ಲಿ ಆರೋಪಿಗಳ ಬೆನ್ನತ್ತಿದ ಗದಗ ಜಿಲ್ಲಾ ಪೊಲೀಸರು ಗಮನಾರ್ಹ ಸಾಧನೆ ಮಾಡಿದ್ದು, ಬರೋಬ್ಬರಿ ₹3.68 ಕೋಟಿ ಮೌಲ್ಯದ ಬಂಗಾರ, ಬೆಳ್ಳಿ, ನಗದು, ವಾಹನಗಳು ಹಾಗೂ ಇತರೆ ಸ್ವತ್ತುಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಪತ್ತೆಯಾದ ಸ್ವತ್ತುಗಳನ್ನು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ವಾರಸುದಾರರು ಹಾಗೂ ಪ್ರಕರಣಗಳ ಫಿರ್ಯಾದಿದಾರರಿಗೆ ಹಸ್ತಾಂತರಿಸುವ ‘ಪ್ರಾಪರ್ಟಿ ರಿಟರ್ನ್ ಪರೇಡ್’ ಸೋಮವಾರ ಜಿಲ್ಲಾ ಪೊಲೀಸ್ ಸಭಾಭವನದಲ್ಲಿ ನಡೆಯಿತು.

ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ, ಐಪಿಎಸ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪತ್ತೆಯಾದ ಸ್ವತ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದರು. ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್, ಐಪಿಎಸ್ ಅವರ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಗೆ ಈ ಮೂಲಕ ಫಲ ಸಿಕ್ಕಂತಾಗಿದೆ.
1,576 ಪ್ರಕರಣಗಳು; 146 ಆರೋಪಿಗಳ ಬಂಧನ
2025ರ ಆಗಸ್ಟ್ 1ರಿಂದ 2026ರ ಜುಲೈ 31ರವರೆಗೆ ಗದಗ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕಳ್ಳತನ, ಮೋಸ–ವಂಚನೆ ಹಾಗೂ ಮೊಬೈಲ್ ಕಳವು ಸೇರಿದಂತೆ ಒಟ್ಟು 1,576 ಪ್ರಕರಣಗಳು ದಾಖಲಾಗಿವೆ. ತನಿಖೆಯ ವೇಳೆ ಹಲವು ಪ್ರಕರಣಗಳನ್ನು ಭೇದಿಸಿ 101 ಸ್ವತ್ತು ಹಾಗೂ ವಂಚನೆ ಪ್ರಕರಣಗಳನ್ನು ಪತ್ತೆಹಚ್ಚಲಾಗಿದ್ದು, 146 ಆರೋಪಿಗಳನ್ನು ಬಂಧಿಸಲಾಗಿದೆ.
ಈ ಅವಧಿಯಲ್ಲಿ ಒಟ್ಟಾರೆ ₹4.80 ಕೋಟಿಗೂ ಅಧಿಕ ಮೌಲ್ಯದ ಸ್ವತ್ತು ಹಾಗೂ ಹಣ ಕಳವಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದ್ದು, ಅದರಲ್ಲಿ ₹3,68,48,989 ಮೌಲ್ಯದ ಸ್ವತ್ತು ಹಾಗೂ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಗಾರ ಕಳ್ಳತನಕ್ಕೆ ಬ್ರೇಕ್
ಜಿಲ್ಲೆಯಲ್ಲಿ 68 ಬಂಗಾರ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 51 ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ. ಒಟ್ಟು 2,785.23 ಗ್ರಾಂ ಬಂಗಾರ ಕಳವಾಗಿದ್ದು, ಇದರ ಅಂದಾಜು ಮೌಲ್ಯ ₹2.30 ಕೋಟಿಗೂ ಅಧಿಕವಾಗಿದೆ. ತನಿಖೆಯಲ್ಲಿ 1,736.69 ಗ್ರಾಂ ಬಂಗಾರವನ್ನು, ₹1,65,63,977 ಮೌಲ್ಯದಲ್ಲಿ ವಶಪಡಿಸಿಕೊಳ್ಳಲಾಗಿದೆ.
37 ಕೆ.ಜಿ.ಗೂ ಅಧಿಕ ಬೆಳ್ಳಿ ವಶ
ಬೆಳ್ಳಿ ಕಳ್ಳತನ ಪ್ರಕರಣಗಳಲ್ಲಿಯೂ ಪೊಲೀಸರು ಯಶಸ್ಸು ಸಾಧಿಸಿದ್ದಾರೆ. ಒಟ್ಟು 55,850.02 ಗ್ರಾಂ ಬೆಳ್ಳಿ ಕಳವಾಗಿದ್ದು, ಅದರ ಅಂದಾಜು ಮೌಲ್ಯ ₹83,61,928. ಈ ಪೈಕಿ 37,191.39 ಗ್ರಾಂ ಬೆಳ್ಳಿ, ₹60,52,877 ಮೌಲ್ಯದ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.

ಕಳ್ಳತನದ ನಗದಿಗೂ ಪತ್ತೆ
ಕಳ್ಳತನ ಪ್ರಕರಣಗಳಲ್ಲಿ ಒಟ್ಟು ₹27,31,900 ನಗದು ಕಳವಾಗಿರುವುದು ವರದಿಯಾಗಿದ್ದು, ತನಿಖೆ ನಡೆಸಿದ ಪೊಲೀಸರು ₹7,98,615 ನಗದನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ವಾಹನ ಕಳ್ಳರಿಗೂ ಶಾಕ್
ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ 36 ಪ್ರಕರಣಗಳು ದಾಖಲಾಗಿದ್ದು, 23 ಪ್ರಕರಣಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಕಳುವಾಗಿದ್ದ ವಾಹನಗಳ ಪೈಕಿ ಒಟ್ಟು 40 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಒಟ್ಟು ಮೌಲ್ಯ ₹17,13,000 ಎಂದು ಪೊಲೀಸರು ತಿಳಿಸಿದ್ದಾರೆ.
ವಂಚಕರಿಂದ ₹37.13 ಲಕ್ಷ ವಶ
ಮೋಸ–ವಂಚನೆ ಹಾಗೂ ಇತರೆ ಪ್ರಕರಣಗಳಲ್ಲಿ 32 ಪ್ರಕರಣಗಳು ದಾಖಲಾಗಿದ್ದು, 27 ಪ್ರಕರಣಗಳನ್ನು ಭೇದಿಸಲಾಗಿದೆ. ಈ ಪ್ರಕರಣಗಳಲ್ಲಿ ಒಟ್ಟು ₹1,22,66,350 ವಂಚನೆ ನಡೆದಿದ್ದು, ತನಿಖೆಯ ಮೂಲಕ ₹37,13,942 ಮೌಲ್ಯದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
CEIR ಮೂಲಕ 965 ಮೊಬೈಲ್ ಪತ್ತೆ
ಕಳ್ಳತನ ಅಥವಾ ಕಳೆದುಹೋದ ಮೊಬೈಲ್ಗಳ ಪತ್ತೆಗೆ ಕೇಂದ್ರ ಸರ್ಕಾರದ CEIR (Central Equipment Identity Register) ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವ ಪೊಲೀಸರು, ಒಟ್ಟು 1,440 ಮೊಬೈಲ್ಗಳ ಕಳವು ಪ್ರಕರಣಗಳಲ್ಲಿ 965 ಮೊಬೈಲ್ಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಪತ್ತೆಯಾದ ಮೊಬೈಲ್ಗಳ ಒಟ್ಟು ಮೌಲ್ಯ ₹97,19,578 ಎಂದು ತಿಳಿಸಲಾಗಿದೆ.
ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕ ಮೆಚ್ಚುಗೆ
ಕಳ್ಳತನ ಹಾಗೂ ವಂಚನೆ ಪ್ರಕರಣಗಳಲ್ಲಿ ಪತ್ತೆಯಾದ ಸ್ವತ್ತುಗಳನ್ನು ಮಾಲೀಕರಿಗೆ ಮರಳಿಸುವ ಮೂಲಕ ಪೊಲೀಸರ ತನಿಖೆಯ ಫಲಿತಾಂಶ ಜನರ ಮುಂದೆ ಪ್ರದರ್ಶಿಸಲಾಯಿತು. ಅಪರಾಧ ನಡೆದ ನಂತರ ಪ್ರಕರಣ ದಾಖಲಿಸುವುದಷ್ಟೇ ಅಲ್ಲದೆ, ಆರೋಪಿಗಳನ್ನು ಪತ್ತೆಹಚ್ಚಿ ಕಳುವಾದ ಸ್ವತ್ತನ್ನು ವಾಪಸ್ ಪಡೆಯುವಲ್ಲಿ ಗದಗ ಜಿಲ್ಲಾ ಪೊಲೀಸರು ತೋರಿದ ಕಾರ್ಯಕ್ಷಮತೆ ಗಮನ ಸೆಳೆಯಿತು.
ಅಪರಾಧ ನಿಯಂತ್ರಣ, ತ್ವರಿತ ತನಿಖೆ ಹಾಗೂ ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಮುಂದೆಯೂ ಇಂತಹ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಭೇದಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

