
ಗದಗ/ಹೈದರಾಬಾದ್, ಆ.7: 2026ನೇ ಸಾಲಿನ Allu Arjun Fans Association (AAFA) ವಾರ್ಷಿಕ ಮಹಾಸಭೆ ಹೈದರಾಬಾದ್ನಲ್ಲಿ ಅದ್ಧೂರಿಯಾಗಿ ನಡೆಯಿತು. ನಟ ಅಲ್ಲು ಅರ್ಜುನ್ ತಮ್ಮ ಸಿನಿಮಾಗಳ ಬ್ಯುಸಿ ಚಿತ್ರೀಕರಣದ ನಡುವೆಯೂ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಅಭಿಮಾನಿ ಸಂಘದ ಪದಾಧಿಕಾರಿಗಳನ್ನು ಭೇಟಿಯಾಗಿ ಅಭಿನಂದಿಸಿದರು.
ತಮ್ಮ ಯಶಸ್ಸಿನ ಹಿಂದೆ ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲವೇ ಪ್ರಮುಖ ಶಕ್ತಿಯಾಗಿದೆ ಎಂದು ತಿಳಿಸಿದ ಅಲ್ಲು ಅರ್ಜುನ್, ಅಭಿಮಾನಿಗಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿ, ಅವರೊಂದಿಗೆ ವಿಶೇಷ ಫೋಟೋಶೂಟ್ನಲ್ಲಿ ಪಾಲ್ಗೊಂಡರು. ಸುಮಾರು 900ಕ್ಕೂ ಹೆಚ್ಚು ಸದಸ್ಯರಿಗೆ ನಟನೊಂದಿಗೆ ವೈಯಕ್ತಿಕ ಫೋಟೋ ತೆಗೆಯುವ ಅವಕಾಶ ಕಲ್ಪಿಸಲಾಗಿದ್ದು, ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಯಿತು.

ಈ ಮಹಾಸಭೆಯಲ್ಲಿ ಕರ್ನಾಟಕ ಸೇರಿದಂತೆ ಏಳು ರಾಜ್ಯಗಳ ರಾಜ್ಯಾಧ್ಯಕ್ಷರು, ಉಪಾಧ್ಯಕ್ಷರು, ರಾಜ್ಯ ಮಂಡಳಿ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಮುಖರಾದ ಶರತ್ಚಂದ್ರ ನಾಯ್ಡು, ಬನ್ನಿವಾಸು, ಧರ್ಮೇಂದ್ರ, ಕರ್ನಾಟಕ ರಾಜ್ಯಾಧ್ಯಕ್ಷ ಸುನಿಲ್ ಜೆ.ಎನ್., ರಾಜ್ಯ ಉಪಾಧ್ಯಕ್ಷರಾದ ಅಲ್ಲು ರಘು ಹಾಗೂ ಕಿಶೋರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಸದಸ್ಯರ ಕಲ್ಯಾಣಕ್ಕಾಗಿ ಅಪಘಾತ ವಿಮಾ ಯೋಜನೆಯನ್ನು ಜಾರಿಗೊಳಿಸಿ, ರಾಜ್ಯ ಮಂಡಳಿ ಸದಸ್ಯರಿಗೆ ₹5 ಲಕ್ಷ ಹಾಗೂ ಜಿಲ್ಲಾ ಪದಾಧಿಕಾರಿಗಳಿಗೆ ₹3 ಲಕ್ಷ ಮೌಲ್ಯದ ವಿಮಾ ಕಾರ್ಡ್ಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ HPV ಲಸಿಕಾ ಜಾಗೃತಿ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲು ಶ್ರಮಿಸಿದ ಸದಸ್ಯರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಅಭಿಮಾನಿಗಳ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ವಿಸ್ತರಿಸುವ ಉದ್ದೇಶದಿಂದ ಆಯೋಜಿಸಿದ್ದ ಈ ಮಹಾಸಭೆ AAFA ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿ ಗುರುತಿಸಿಕೊಂಡಿತು.
ಇದೇ ವೇಳೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಹಿರೇಬಜಾರದ ನಿವಾಸಿ ಶಿವಯ್ಯ ವಿ. ಸಾರಂಗಮಠ ಅವರನ್ನು ನಟ ಅಲ್ಲು ಅರ್ಜುನ್ ಅಭಿಮಾನಿ ಬಳಗದ (AAFA) ಗದಗ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಅವರ ನೇಮಕಕ್ಕೆ ಸಂಘಟನೆಯ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


