ಪ್ರಜಾಪ್ರಭುತ್ವದ ನಾಲ್ಕನೇ ಅಂಗಕ್ಕೆ ಅವಮಾನ: ಮಾಜಿ ನ್ಯಾಯಮೂರ್ತಿ ಚಂದ್ರಶೇಖರಯ್ಯ ವಿರುದ್ಧ ಪತ್ರಕರ್ತರ ಆಕ್ರೋಶ
ಗಜೇಂದ್ರಗಡ, ಜು. 26: ಮಾಜಿ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಮಾಜಿ ಉಪ ಲೋಕಾಯುಕ್ತ ಚಂದ್ರಶೇಖರಯ್ಯ ಅವರು ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರನ್ನು “ನಾಯಿ, ನರಿಗಳು” ಎಂದು ಹೋಲಿಸಿರುವುದು ಹಾಗೂ ಬ್ರಾಹ್ಮಣೇತರ ಪತ್ರಕರ್ತರ ಕುರಿತು ಅವಹೇಳನಕಾರಿ ರೀತಿಯಲ್ಲಿ ಮಾತನಾಡಿರುವುದು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕೋದ್ಯಮಕ್ಕೆ ಎಸಗಿದ ಗಂಭೀರ ಅಪಮಾನವಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ಗಜೇಂದ್ರಗಡ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಎಸ್. ರಾಠೋಡ ತೀವ್ರವಾಗಿ ಖಂಡಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಅವರು, “ಆಗ ಬ್ರಾಹ್ಮಣರು ಮಾತ್ರ ಪತ್ರಕರ್ತರಾಗಿದ್ದರು, ಈಗ ನಾಯಿ-ನರಿಗಳೆಲ್ಲ ಪತ್ರಕರ್ತರಾಗಿದ್ದಾರೆ” ಎಂಬ ಹೇಳಿಕೆ ಸಮಾಜದಲ್ಲಿ ಜಾತಿ ದ್ವೇಷವನ್ನು ಪ್ರಚೋದಿಸುವ ಹಾಗೂ ಪತ್ರಕರ್ತರ ಘನತೆಗೆ ಧಕ್ಕೆ ತರುವಂತದ್ದಾಗಿದೆ. ನ್ಯಾಯಾಂಗದಂತಹ ಉನ್ನತ ಹುದ್ದೆ ಅಲಂಕರಿಸಿದ್ದ ವ್ಯಕ್ತಿಯಿಂದ ಇಂತಹ ಹೇಳಿಕೆ ಹೊರಬಂದಿರುವುದು ಅತ್ಯಂತ ವಿಷಾದನೀಯ ಎಂದು ತಿಳಿಸಿದ್ದಾರೆ.
ಬ್ರಾಹ್ಮಣೇತರ ಪತ್ರಕರ್ತರ ಕೊಡುಗೆ ಅನನ್ಯ
ಕರ್ನಾಟಕದ ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಬ್ರಾಹ್ಮಣೇತರ, ಹಿಂದುಳಿದ, ದಲಿತ ಹಾಗೂ ಶೋಷಿತ ಸಮುದಾಯಗಳ ಪತ್ರಕರ್ತರ ಕೊಡುಗೆ ಅಪಾರವಾಗಿದೆ. ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಧ್ವನಿಯಾಗಿ ಕಾರ್ಯನಿರ್ವಹಿಸಿ, ಪತ್ರಿಕೋದ್ಯಮವನ್ನು ಜನಸಾಮಾನ್ಯರ ಹೋರಾಟದ ವೇದಿಕೆಯಾಗಿಸಿದ್ದಾರೆ ಎಂದು ರಾಠೋಡ ಹೇಳಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅವರ ‘ಮೂಕನಾಯಕ’ ಹಾಗೂ ‘ಬಹಿಷ್ಕೃತ ಭಾರತ’ ಪತ್ರಿಕೆಗಳು ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ಹೊಸ ಚಳವಳಿಗೆ ನಾಂದಿ ಹಾಡಿದವು. ಸಿದ್ದವನಹಳ್ಳಿ ಕೃಷ್ಣಶರ್ಮ ಅವರ ‘ವಿಶ್ವಕರ್ನಾಟಕ’, ಬಿ. ಕೃಷ್ಣಪ್ಪ ಅವರ ‘ಪಂಚಮ’, ಹಾಗೂ ಪಿ. ಲಂಕೇಶ್ ಅವರ ‘ಲಂಕೇಶ್ ಪತ್ರಿಕೆ’ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಚಿಂತನೆ, ಸಾಮಾಜಿಕ ನ್ಯಾಯ ಮತ್ತು ಪ್ರಗತಿಪರ ಮೌಲ್ಯಗಳನ್ನು ಬಲಪಡಿಸಿದವು ಎಂದು ಅವರು ಸ್ಮರಿಸಿದ್ದಾರೆ.
ಅಲ್ಲದೆ, ಪತ್ರಿಕೋದ್ಯಮವನ್ನು ಗ್ರಾಂಥಿಕ ಭಾಷೆಯಿಂದ ಜನಸಾಮಾನ್ಯರ ಆಡುಭಾಷೆಗೆ ತಂದು, ರೈತರ ಸಮಸ್ಯೆ, ಕಾರ್ಮಿಕರ ಬದುಕು, ಜಾತಿ ದೌರ್ಜನ್ಯ, ಸಾಮಾಜಿಕ ಅಸಮಾನತೆ ಹಾಗೂ ಭ್ರಷ್ಟಾಚಾರದಂತಹ ಜನಪರ ವಿಷಯಗಳನ್ನು ಮುಖ್ಯವಾಹಿನಿಗೆ ತಂದಿರುವುದು ಪ್ರಗತಿಪರ ಹಾಗೂ ಬ್ರಾಹ್ಮಣೇತರ ಪತ್ರಕರ್ತರ ಮಹತ್ವದ ಸಾಧನೆಯಾಗಿದೆ ಎಂದು ತಿಳಿಸಿದ್ದಾರೆ.
ಬೇಷರತ್ ಕ್ಷಮೆಯಾಚನೆಗೆ ಆಗ್ರಹ
ಇಂತಹ ಐತಿಹಾಸಿಕ ಕೊಡುಗೆಯನ್ನು ಮರೆತು ಪತ್ರಕರ್ತರನ್ನು ಹಾಗೂ ನಿರ್ದಿಷ್ಟ ಸಮುದಾಯದ ಪತ್ರಕರ್ತರನ್ನು ಕೀಳಾಗಿ ಕಾಣುವ ಹೇಳಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ಮಾಜಿ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರು ತಮ್ಮ ಹೇಳಿಕೆಯನ್ನು ತಕ್ಷಣವೇ ಹಿಂಪಡೆದು, ಸಾರ್ವಜನಿಕವಾಗಿ ಬೇಷರತ್ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಪತ್ರಕರ್ತರ ಸಂಘಟನೆಗಳು ಪ್ರಜಾಸತ್ತಾತ್ಮಕ ಹೋರಾಟ ರೂಪಿಸಲಿವೆ ಎಂದು ಮಂಜುನಾಥ ಎಸ್. ರಾಠೋಡ ಎಚ್ಚರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಗದಗ ಜಿಲ್ಲಾ ಯೋಜನಾ ಸಮಿತಿ ಸದಸ್ಯ ರಾಜು ಸಾಂಗ್ಲಿಕರ, ರಾಜ್ಯದಲ್ಲಿ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ) ವರ್ಗದ ಸಾವಿರಾರು ಪತ್ರಕರ್ತರು ಸಮಾಜದ ಪರವಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಾಜಿ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರು ಉದ್ದೇಶಪೂರ್ವಕವಾಗಿ ಅಹಿಂದ ವರ್ಗದ ಪತ್ರಕರ್ತರನ್ನು ಅವಹೇಳನಗೊಳಿಸುವ ರೀತಿಯಲ್ಲಿ ಹೇಳಿಕೆ ನೀಡಿರುವುದು ಖಂಡನೀಯ. ತಮ್ಮ ಹೇಳಿಕೆಯನ್ನು ಕೂಡಲೇ ಹಿಂಪಡೆದು ಸಾರ್ವಜನಿಕವಾಗಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಇಲ್ಲವಾದಲ್ಲಿ ಪತ್ರಕರ್ತರ ಸಂಘಟನೆಗಳು, ಪ್ರಗತಿಪರ ಸಂಘ-ಸಂಸ್ಥೆಗಳು ಹಾಗೂ ಅಹಿಂದ ಸಮುದಾಯದ ಮುಖಂಡರು ರಾಜ್ಯಾದ್ಯಂತ ಪ್ರಜಾಸತ್ತಾತ್ಮಕ ಹೋರಾಟವನ್ನು ಹಮ್ಮಿಕೊಳ್ಳಲಿದ್ದಾರೆ ಎಂದು ಅವರು ಎಚ್ಚರಿಸಿದರು.

