ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರದ ಆರೋಪ
ಕಮಿಷನ್ ದಂಧೆ, ಅಕ್ರಮ ನೇಮಕಾತಿ, ಟೆಂಡರ್ ವಿಳಂಬ ಆರೋಪ; ಉನ್ನತ ಮಟ್ಟದ ತನಿಖೆಗೆ ಆಗ್ರಹ
ಗದಗವಾಣಿ ಸುದ್ದಿಮೂಲ
ಬೆಂಗಳೂರು, ಜು. 18:
ಯುವಜನರಿಗೆ ಕೌಶಲ್ಯ ತರಬೇತಿ ಹಾಗೂ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ (Karnataka Skill Development Corporation) ವಿರುದ್ಧ ಭ್ರಷ್ಟಾಚಾರ, ಕಮಿಷನ್ ದಂಧೆ, ಅಕ್ರಮ ನೇಮಕಾತಿ ಹಾಗೂ ಆಡಳಿತಾತ್ಮಕ ಲೋಪಗಳ ಕುರಿತು ಗಂಭೀರ ಆರೋಪಗಳು ಕೇಳಿಬಂದಿದ್ದು, ಈ ಸಂಬಂಧ ಉನ್ನತ ಮಟ್ಟದ ಸ್ವತಂತ್ರ ತನಿಖೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ.

ದೂರುದಾರರ ಪ್ರಕಾರ, ನಿಗಮದ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಕೊರತೆಯಿದ್ದು, ಪ್ರಮುಖ ಆಡಳಿತಾತ್ಮಕ ನಿರ್ಧಾರಗಳು ಹಾಗೂ ಗುತ್ತಿಗೆ ಪ್ರಕ್ರಿಯೆಗಳಲ್ಲಿ ಅಕ್ರಮಗಳು ನಡೆದಿರುವ ಶಂಕೆ ವ್ಯಕ್ತವಾಗಿದೆ. ಸರ್ಕಾರಿ ಅನುದಾನದ ಬಳಕೆ ಹಾಗೂ ಯೋಜನೆಗಳ ಅನುಷ್ಠಾನ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಲಾಗಿದೆ.
‘ ಕೌಶಲ್ಯ ಕರ್ನಾಟಕ’ ಯೋಜನೆಗೆ ಹಿನ್ನಡೆ ಆರೋಪ
ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷೆಯ ‘ಕೌಶಲ್ಯ ಕರ್ನಾಟಕ’ ಯೋಜನೆಯಡಿ ಕೈಗೊಳ್ಳಲಾಗಿರುವ ಐಎಲ್ಸಿ (ILC) ಹಾಗೂ ‘ಫ್ಯೂಚರ್ ಸ್ಕಿಲ್ಸ್’ (Future Skills) ಯೋಜನೆಗಳ ಟೆಂಡರ್ ಪ್ರಕ್ರಿಯೆ ಮತ್ತು ಅನುಷ್ಠಾನದಲ್ಲಿ ವಿಳಂಬ ಉಂಟಾಗಿರುವುದರಿಂದ ಸಾವಿರಾರು ಯುವಕ-ಯುವತಿಯರಿಗೆ ಕೌಶಲ್ಯ ತರಬೇತಿ ಹಾಗೂ ಉದ್ಯೋಗಾವಕಾಶಗಳು ಸಕಾಲದಲ್ಲಿ ದೊರೆಯುತ್ತಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಕ್ರಮ ನೇಮಕಾತಿ ಆರೋಪ
ನಿಗಮದಲ್ಲಿ ನಿಯಮಬಾಹಿರವಾಗಿ ನೇಮಕಾತಿಗಳು ನಡೆದಿದ್ದು, ಖರೀದಿ ಪ್ರಕ್ರಿಯೆಗಳು, ಮುದ್ರಣ ಗುತ್ತಿಗೆಗಳು, ಸಿಬ್ಬಂದಿ ನೇಮಕಾತಿ, ಅಧಿಕಾರಿಗಳ ವರ್ಗಾವಣೆ ಹಾಗೂ ನಿಯೋಜನೆಗೆ ಸಂಬಂಧಿಸಿದ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ.

ದೂರಿನಲ್ಲಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ್ (ಶಿವಕಾಂತಮ್ಮ ನಾಯಕ್), ಕಾರ್ಯನಿರ್ವಾಹಕ ನಿರ್ದೇಶಕಿ ಸುಮತಿ ಬಿ.ಎಸ್., ಉಪ ಪ್ರಧಾನ ವ್ಯವಸ್ಥಾಪಕರಾದ ಅರ್ಚನಾ ರಾಮನಾಯಕ್ ಹಾಗೂ ವರಲಕ್ಷ್ಮಿ ನಾಯಕ್, ಸಿಬ್ಬಂದಿಗಳಾದ ಸಾಗರ್ ರಾಥೋಡ್ ಮತ್ತು ವೆಂಕಟೇಶ್ ನಾಯಕ್ ಸೇರಿದಂತೆ ಕೆಲ ಅಧಿಕಾರಿಗಳ ಹೆಸರುಗಳನ್ನು ಉಲ್ಲೇಖಿಸಲಾಗಿದ್ದು, ಇವರ ಆಡಳಿತಾತ್ಮಕ ನಿರ್ಧಾರಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಕೋರಲಾಗಿದೆ.
ಸ್ವತಂತ್ರ ತನಿಖಾ ಸಮಿತಿ ರಚನೆಗೆ ಒತ್ತಾಯ
ಸಾರ್ವಜನಿಕರ ತೆರಿಗೆ ಹಣದ ಬಳಕೆ ಹಾಗೂ ಯುವಕರ ಭವಿಷ್ಯಕ್ಕೆ ಸಂಬಂಧಿಸಿದ ಯೋಜನೆಗಳಲ್ಲಿ ಅಕ್ರಮ ನಡೆದಿರುವ ಆರೋಪಗಳ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ, ನಿವೃತ್ತ ನ್ಯಾಯಾಧೀಶರು ಅಥವಾ ಹಿರಿಯ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ಸ್ವತಂತ್ರ ಹಾಗೂ ಪಾರದರ್ಶಕ ತನಿಖಾ ಸಮಿತಿಯನ್ನು ರಚಿಸಬೇಕು ಎಂದು ದೂರುದಾರರು ಆಗ್ರಹಿಸಿದ್ದಾರೆ.
ಆರೋಪಗಳ ಕುರಿತು ಸತ್ಯಾಸತ್ಯತೆ ಹೊರಬರಲು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗಿದೆ.

