ಗ್ರಾಮೀಣ ಪ್ರತಿಭೆಗೆ ವಿದ್ಯಾರ್ಥಿವೇತನದ ಬೆಂಬಲ
ಗ್ರಾಮೀಣ ಕೂಟ–ಕ್ರೆಡಿಟ್ ಆಕ್ಸಿಸ್ ಇಂಡಿಯಾ ಫೌಂಡೇಶನ್ನಿಂದ ಎಸ್ಎಸ್ಎಲ್ಸಿ ಟಾಪರ್ಗಳಿಗೆ ಗೌರವ
ಗದಗವಾಣಿ ಸುದ್ದಿಮೂಲ
ಗದಗ, ಜೂ. 26: ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಗ್ರಾಮೀಣ ಕೂಟ ಹಾಗೂ ಕ್ರೆಡಿಟ್ ಆಕ್ಸಿಸ್ ಇಂಡಿಯಾ ಫೌಂಡೇಶನ್ ಆಶ್ರಯದಲ್ಲಿ ನಗರದ ಡಿಎಸ್ಪಿ ಕಚೇರಿಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ 10 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಪ ಪೊಲೀಸ್ ಅಧೀಕ್ಷಕ (ಡಿಎಸ್ಪಿ) ಮುರ್ತುಜಾ ಖಾದ್ರಿ ಅವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಪ್ರಮಾಣಪತ್ರಗಳನ್ನು ವಿತರಿಸಿ ಅಭಿನಂದಿಸಿದರು. ಬಳಿಕ ಮಾತನಾಡಿ, “ಶಿಕ್ಷಣವೇ ವ್ಯಕ್ತಿಯ ಬದುಕಿನ ಭದ್ರ ಬುನಾದಿ. ಗ್ರಾಮೀಣ ವಿದ್ಯಾರ್ಥಿಗಳಿಗೆ ಇಂತಹ ಪ್ರೋತ್ಸಾಹಧನಗಳು ಉನ್ನತ ಶಿಕ್ಷಣದ ಕನಸು ನನಸಾಗಿಸಲು ನೆರವಾಗುತ್ತವೆ. ದೊರೆತ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು,” ಎಂದು ಕರೆ ನೀಡಿದರು.
ಗದಗ ಪೊಲೀಸ್ ನಿರೀಕ್ಷಕ ಸಿದ್ದರಾಮೇಶ್ವರ ಗಡ್ಡದ ಮಾತನಾಡಿ, ಉತ್ತಮ ಶಿಕ್ಷಣ ಮತ್ತು ಉತ್ತಮ ಅಂಕಗಳು ಭವಿಷ್ಯದಲ್ಲಿ ಉತ್ತಮ ಉದ್ಯೋಗ ಹಾಗೂ ಗೌರವಯುತ ಬದುಕಿಗೆ ದಾರಿ ಮಾಡಿಕೊಡುತ್ತವೆ ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ್ ಅವರು, ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಇನ್ನಷ್ಟು ಸಾಧನೆ ಮಾಡುವ ಸಂಕಲ್ಪ ಹೊಂದಬೇಕು ಎಂದು ತಿಳಿಸಿದರು. ಉನ್ನತ ವ್ಯಾಸಂಗಕ್ಕೆ ಅಗತ್ಯವಿರುವ ಬ್ಯಾಂಕಿಂಗ್ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದ ಅವರು, ಅರ್ಹ ವಿದ್ಯಾರ್ಥಿಗಳಿಗೆ ಬ್ಯಾಂಕ್ಗಳಿಂದ ಸೂಕ್ತ ನೆರವು ದೊರೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮೀಣ ಕೂಟದ ಡಿವಿಜನಲ್ ಮ್ಯಾನೇಜರ್ ನಾಗಪ್ಪ ಸಿ., ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ ಎಂದು ಹೇಳಿದರು. ಶಿಕ್ಷಣಕ್ಕೆ ಬೆಂಬಲ ನೀಡುವ ಮೂಲಕ ಸಮಾಜದ ಸಮಗ್ರ ಅಭಿವೃದ್ಧಿಗೆ ಸಂಸ್ಥೆ ಬದ್ಧವಾಗಿದೆ ಎಂದು ತಿಳಿಸಿದರು.

ಸಸಿ ನೆಡುವ ಮೂಲಕ ಪರಿಸರ ಕಾಳಜಿ
ವಿದ್ಯಾರ್ಥಿವೇತನ ವಿತರಣೆಯೊಂದಿಗೆ ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಉದ್ದೇಶದಿಂದ ಅತಿಥಿಗಳು ಹಾಗೂ ವಿದ್ಯಾರ್ಥಿಗಳು ಸಸಿ ನೆಟ್ಟು ಪರಿಸರ ಜಾಗೃತಿ ಮೂಡಿಸಿದರು. ಶಿಕ್ಷಣದ ಜೊತೆಗೆ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನೂ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಏರಿಯಾ ಮ್ಯಾನೇಜರ್ ಚಂದ್ರಪ್ಪ ಅರಸನಾಳು, ಶಾಖಾ ವ್ಯವಸ್ಥಾಪಕ ಸುರೇಶ್, ಆಡಿಟ್ ತಂಡದ ಚಂದ್ರು, ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.

