ಗಜೇಂದ್ರಗಡ, ಜು. 13: ತಾಲೂಕಿನ ಕುಂಟೋಜಿ ಗ್ರಾಮ ವ್ಯಾಪ್ತಿಯ ಜೀಗೇರಿ–ವದೋಗೋಳ ಹದ್ದಿನಲ್ಲಿ ನಡೆಯುತ್ತಿದೆ ಎನ್ನಲಾದ ಅನಧಿಕೃತ ಕಲ್ಲು ಗಣಿಗಾರಿಕೆಯನ್ನು ತಕ್ಷಣ ನಿಲ್ಲಿಸಿ, ಸರ್ಕಾರಿ ಭೂಮಿ ಕಬಳಿಕೆ ಹಾಗೂ ಪರಿಸರ ಹಾನಿಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ಎಸ್) ನೇತೃತ್ವದಲ್ಲಿ ಸೋಮವಾರ ತಹಶೀಲ್ದಾರರ ಮೂಲಕ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ, ತಾಲೂಕಿನ ವಿವಿಧ ಭಾಗಗಳಲ್ಲಿ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ, ಪರಿಸರಕ್ಕೆ ಹಾನಿ ಉಂಟುಮಾಡುವ ರೀತಿಯಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಪರಿಣಾಮಕಾರಿ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಅಕ್ರಮ ಚಟುವಟಿಕೆಗಳಿಗೆ ಉತ್ತೇಜನ ಸಿಗುತ್ತಿದೆ ಎಂದು ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ.

ಅನಧಿಕೃತ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಅಕ್ರಮ ಗಣಿಗಾರಿಕೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ಜೊತೆಗೆ ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಕೆಪಿಆರ್ಎಸ್ ಮುಖಂಡರಾದ ಬಾಲು ರಾಠೋಡ, ಪೀರು ರಾಠೋಡ, ರೂಪೇಶ್ ಮಾಳೋತ್ತರ, ಚನ್ನಪ್ಪ ಗುಗಳೋತ್ತರ, ವೀರೇಶ ರಾಠೋಡ, ಶಿವಪ್ಪ ಮಾಳೋತ್ತರ, ಪೀರವ್ವ ರಾಠೋಡ, ದೇವಕ್ಕ ಗುಗಳೋತ್ತರ, ದೀಪಲೇಪ್ಪ ಮಾಳೋತ್ತರ, ವೀರೇಶ ಮಾಳೋತ್ತರ, ಪರಸ್ಪರ ರಾಠೋಡ, ಶಿವಪ್ಪ ರಾಠೋಡ, ಮೇಘಪ್ಪ ಅಜ್ಮೀರ್, ಮುತ್ತಪ್ಪ ರಾಠೋಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

