ಚಲಿಸುವ ಆಂಬುಲೆನ್ಸ್ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ!
108 ಆಂಬುಲೆನ್ಸ್ ಸಿಬ್ಬಂದಿಯ ಸಮಯಪ್ರಜ್ಞೆ, ತುರ್ತು ಸೇವೆಗೆ ಸಾರ್ವಜನಿಕರ ಮೆಚ್ಚುಗೆ
ಗಜೇಂದ್ರಗಡ/ಗದಗ: ಚಲಿಸುವ 108 ಆಂಬುಲೆನ್ಸ್ನಲ್ಲೇ ಗರ್ಭಿಣಿಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಅ.26ರಂದು ಸಂಜೆ 6 ಗಂಟೆ ಸುಮಾರಿಗೆ ರೋಣ–ಗದಗ ಮಾರ್ಗದಲ್ಲಿ ನಡೆದಿದೆ.

ರೋಣ ತಾಲೂಕಿನ 20 ವರ್ಷದ ರೇಣುಕಾ ದಾನೇಶ್ ಮೇತ್ರಿ ಎಂಬುವವರನ್ನು ಹೆರಿಗೆಗಾಗಿ ರೋಣ ತಾಲೂಕು ಆಸ್ಪತ್ರೆಯಿಂದ ಗದಗ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಮಾರ್ಗಮಧ್ಯೆಯೇ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಆಂಬುಲೆನ್ಸ್ ಸಿಬ್ಬಂದಿ ಅಗತ್ಯ ಮುನ್ನೆಚ್ಚರಿಕೆ ವಹಿಸಿ ಹೆರಿಗೆಗೆ ಸಹಕರಿಸಿದ್ದಾರೆ. ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
ಹೆರಿಗೆಯ ಬಳಿಕ ತಾಯಿ ಮತ್ತು ಮಗುವನ್ನು ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಆರೈಕೆಗೆ ವ್ಯವಸ್ಥೆ ಮಾಡಲಾಗಿದೆ.
ಈ ಸಂದರ್ಭದಲ್ಲಿ 108 ಆಂಬುಲೆನ್ಸ್ನ ಪೈಲಟ್ ಪರಶುರಾಮ ಪೂಜಾರ ಹಾಗೂ ತುರ್ತು ವೈದ್ಯಕೀಯ ತಂತ್ರಜ್ಞ (EMT) ವಿಶ್ವನಾಥ್ ಎಂ. ಯಂಕಂಚಿ ಅವರು ಸಮಯಪ್ರಜ್ಞೆ ಮತ್ತು ಕರ್ತವ್ಯನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದಾರೆ.
ತುರ್ತು ಸಂದರ್ಭದಲ್ಲಿ ತಾಯಿ ಮತ್ತು ಮಗುವಿನ ಸುರಕ್ಷತೆಗೆ ಆದ್ಯತೆ ನೀಡಿ ನೆರವಾದ 108 ಆಂಬುಲೆನ್ಸ್ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

