ರಾಜಸ್ಥಾನಕ್ಕೆ ಸಾಗಿಸುತ್ತಿದ್ದ ಕಂಟೇನರ್ ಪೊಲೀಸ್ ವಶಕ್ಕೆ; ಅಕ್ಕಿ ಮೂಲದ ಕುರಿತು ತನಿಖೆಗೆ ಆಗ್ರಹ

ಬಾಗಲಕೋಟೆ, ಅ.19: ಜಿಲ್ಲೆಯ ನಾಗರಹಳ್ಳಿ ಟೋಲ್ ಬಳಿ ಸೋಮವಾರ ಬೆಳಗಿನ ಜಾವ ಸುಮಾರು 4 ಗಂಟೆಗೆ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎನ್ನಲಾದ ಸುಮಾರು 35 ಟನ್ ಪಡಿತರ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಾಜಸ್ಥಾನ ನೋಂದಣಿಯ RJ 37 GB 7425 ಸಂಖ್ಯೆಯ 16 ಚಕ್ರಗಳ ಕಂಟೇನರ್ನಲ್ಲಿ ಆಹಾರ ಇಲಾಖೆಯ ಲೇಬಲ್ ಹೊಂದಿದ್ದ ಅಕ್ಕಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ದಲಿತ ಪರ ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಖಚಿತ ಮಾಹಿತಿ ಮೇರೆಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ವಾಹನವನ್ನು ತಡೆದು ಪರಿಶೀಲನೆ ನಡೆಸಿ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಇಲಕಲ್ಲಿನ ಗೋದಾಮಿನಿಂದ ಅಕ್ಕಿ ಸಾಗಣೆ?
ಕಂಟೇನರ್ ಚಾಲಕ ಸದ್ದಾಂ ನೀಡಿದ ಮಾಹಿತಿ ಪ್ರಕಾರ, ಇಲಕಲ್ಲಿನ ವಿಠಲ್ ಜಕ್ಕಾ ಎಂಬುವವರಿಗೆ ಸೇರಿದ ಗೋದಾಮಿನಿಂದ ಅಕ್ಕಿಯನ್ನು ತುಂಬಿಕೊಂಡು ಗುಜರಾತಿನ ಅಹಮದಾಬಾದ್ ಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ವಿತರಿಸಬೇಕಾದ ಪಡಿತರ ಅಕ್ಕಿ ಖಾಸಗಿ ಗೋದಾಮಿನಿಂದ ಹೊರರಾಜ್ಯಕ್ಕೆ ಸಾಗಿಸಲಾಗುತ್ತಿತ್ತೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಅಕ್ಕಿಯ ಮೂಲ, ಸಾಗಣೆಗೆ ಸಂಬಂಧಿಸಿದ ದಾಖಲೆಗಳು, ವಾಹನದ ಮಾಲೀಕತ್ವ ಹಾಗೂ ಈ ಸಾಗಣೆಯ ಹಿಂದಿರುವವರ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಸಮಗ್ರ ತನಿಖೆಗೆ ಆಗ್ರಹ
ಪಡಿತರ ಅಕ್ಕಿ ಬಡವರ ಆಹಾರ ಭದ್ರತೆಯೊಂದಿಗೆ ನೇರ ಸಂಬಂಧ ಹೊಂದಿದೆ. ಇಂತಹ ಅಕ್ಕಿ ನಿಯಮಬಾಹಿರವಾಗಿ ಸಾಗಣೆಯಾಗಿದ್ದರೆ, ಅದಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ವಶಪಡಿಸಿಕೊಂಡ ಅಕ್ಕಿಯ ಪ್ರಮಾಣವನ್ನು ಅಧಿಕೃತವಾಗಿ ದೃಢಪಡಿಸಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

.

