ರಾಜರಾಜೇಶ್ವರಿ ಅನಧಿಕೃತ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗೆ ಪದೇಪದೇ ಥಳತ ಆರೋಪ; ಹಲಗೇರಿ ವಸತಿ ಶಾಲೆ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ
ರವಿಕುಮಾರ ಕೊಪ್ಪಳ
ಕೊಪ್ಪಳ : ಹಲಗೇರಿ ಗ್ರಾಮದ ಶ್ರೀ ರಾಜರಾಜೇಶ್ವರಿ ರೆಸಿಡೆನ್ಸಿಯಲ್ ಸ್ಕೂಲ್ನಲ್ಲಿ 8ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಪದೇಪದೇ ಕ್ರೂರ ದೈಹಿಕ ಶಿಕ್ಷೆ ನೀಡಲಾಗಿದೆ ಎಂದು ಆರೋಪಿಸಿ, ಬಾಲಕನ ತಂದೆ ಶರಣಪ್ಪ ಚೌಡಕಿ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ದೂರಿನ ಪ್ರಕಾರ, ಶಾಲೆಯ ಸಂಸ್ಥಾಪಕರಾದ ವೀರಣ್ಣ ಯ. ಕಂಬಳಿ ಅವರು ವಿದ್ಯಾರ್ಥಿ ಕು. ಕೃಷ್ಣಮೂರ್ತಿ ಚೌಡಕಿಗೆ ಹಲವು ಬಾರಿ ಹೊಡೆದಿದ್ದಾರೆ ಎನ್ನಲಾಗಿದೆ. ಈ ಕುರಿತು ಪೋಷಕರು ಈ ಹಿಂದೆಯೇ ಎರಡು ಬಾರಿ ಶಾಲೆಗೆ ತೆರಳಿ ಎಚ್ಚರಿಕೆ ನೀಡಿದ್ದರೂ, ದೈಹಿಕ ಶಿಕ್ಷೆ ಮುಂದುವರಿದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಜೂನ್ 9ರಂದು ಶಿಕ್ಷೆಯ ಭಯದಿಂದ ಬಾಲಕ ಶಾಲೆಯಿಂದ ನಾಪತ್ತೆಯಾಗಿದ್ದು, ಬಳಿಕ ಶಾಲೆಯ ಸಂಸ್ಥಾಪಕರೇ ದೂರವಾಣಿ ಮೂಲಕ “ಮಗು ಕಾಣೆಯಾಗಿರುವ” ಕುರಿತು ಮಾಹಿತಿ ನೀಡಿದ್ದರು ಎಂದು ಪೋಷಕರು ತಿಳಿಸಿದ್ದಾರೆ. ಘಟನೆಯಿಂದ ಮಗುವಿನ ಮಾನಸಿಕ ಸ್ಥಿತಿ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಶುಲ್ಕ ಆಧಾರಿತ ವಸತಿ ಶಾಲೆಯಾಗಿರುವುದರಿಂದ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಆರೈಕೆಯ ಸಂಪೂರ್ಣ ಹೊಣೆ ಶಾಲೆಯ ಮೇಲಿದೆ. ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ-2009ರ ಕಲಂ 17ರ ಪ್ರಕಾರ ದೈಹಿಕ ಶಿಕ್ಷೆ ನಿಷೇಧವಾಗಿದ್ದು, ಈ ಪ್ರಕರಣದಲ್ಲಿ ಸಂಬಂಧಪಟ್ಟವರನ್ನು ತಕ್ಷಣ ಅಮಾನತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಾಲಾ ಆಡಳಿತದ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದೆ.

