ಸೆ.20ರಂದು ಗದಗ ಜಿಲ್ಲಾ ಛಾಯಾಗ್ರಾಹಕರ ಸಂಘದ 14ನೇ ವಾರ್ಷಿಕೋತ್ಸವ
187ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಹಾಗೂ ಸರ್ವಸಾಧಾರಣ ಸಭೆ; ನೂತನ ಅಧ್ಯಕ್ಷರ ಆಯ್ಕೆ
ಗದಗ: ಗದಗ ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಘದ ವತಿಯಿಂದ 187ನೇ ವಿಶ್ವ ಛಾಯಾಗ್ರಹಣ ದಿನಾಚರಣೆ, 14ನೇ ವಾರ್ಷಿಕೋತ್ಸವ ಹಾಗೂ 2026–27ನೇ ಸಾಲಿನ ಸರ್ವಸಾಧಾರಣ ಸಭೆ ಸೆ.20ರಂದು ನಡೆಯಲಿದೆ.
ನಗರದ ಪೂಜ್ಯ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಶಿವಾನುಭವ ಮಂಟಪದಲ್ಲಿ ಭಾನುವಾರ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಛಾಯಾಗ್ರಹಣ ಕ್ಷೇತ್ರದ ಸಾಧಕರು, ಛಾಯಾಗ್ರಾಹಕರು, ಫೋಟೋ–ವಿಡಿಯೋ ಸ್ಟುಡಿಯೋ ಮಾಲೀಕರು, ಕಲರ್ ಲ್ಯಾಬ್ ಹಾಗೂ ಎಲ್ಇಡಿ ವಾಲ್ ಮಾಲೀಕರು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಛಾಯಾಗ್ರಾಹಕರು ಪಾಲ್ಗೊಳ್ಳಲಿದ್ದಾರೆ.
ದೊರೆಸ್ವಾಮಿ ವಿರಕ್ತಮಠ, ಭೈರನಹಟ್ಟಿ ಹಾಗೂ ತೋಂಟದಾರ್ಯ ಶಾಖಾಮಠ, ಶಿರೋಳದ ಶ್ರೀ ಮ.ನಿ.ಪ್ರ. ಶಾಂತಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ. ಗದಗ ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಶ್ರೀ ಕೃಷ್ಣಗೌಡ ಎಚ್. ಪಾಟೀಲ ಅವರು ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಪವನ ಜೆ. ಮೇಹರವಾಡೆ ಅಧ್ಯಕ್ಷತೆ ವಹಿಸಲಿದ್ದಾರೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ, ಗದಗ ಉಪವಿಭಾಗದ ಸಹಾಯಕ ಪೊಲೀಸ್ ಅಧಿಕಾರಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ಫೋಟೋಗ್ರಾಫರ್ಸ್ ಅಸೋಸಿಯೇಷನ್ನ ರಾಜ್ಯ ಪದಾಧಿಕಾರಿಗಳು ಹಾಗೂ ವಿವಿಧ ಜಿಲ್ಲೆಗಳ ಛಾಯಾಗ್ರಾಹಕರ ಸಂಘಗಳ ಪ್ರತಿನಿಧಿಗಳೂ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ.
ಸರ್ವಸಾಧಾರಣ ಸಭೆಯಲ್ಲಿ ಮಹತ್ವದ ವಿಚಾರಗಳು
ಕಾರ್ಯಕ್ರಮದ ಅಂಗವಾಗಿ 2026–27ನೇ ಸಾಲಿನ ಸರ್ವಸಾಧಾರಣ ಸಭೆ ನಡೆಯಲಿದ್ದು, ಮಧ್ಯಾಹ್ನ 1.30ಕ್ಕೆ ಭೋಜನದ ನಂತರ ಮಧ್ಯಾಹ್ನ 2.30ರಿಂದ ಲೆಕ್ಕಪರಿಶೋಧನೆ, ಸಂಘದ ವಿವಿಧ ವಿಷಯಗಳ ಚರ್ಚೆ ಹಾಗೂ ನೂತನ ಅಧ್ಯಕ್ಷರ ಆಯ್ಕೆ ಸೇರಿದಂತೆ ಸಂಘದ ಆಡಳಿತಾತ್ಮಕ ವಿಚಾರಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ.
ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಛಾಯಾಗ್ರಹಣ ಕ್ಷೇತ್ರದ ಮಹತ್ವ, ವೃತ್ತಿಯಲ್ಲಿನ ಬದಲಾವಣೆಗಳು, ಆಧುನಿಕ ತಂತ್ರಜ್ಞಾನ ಮತ್ತು ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಕುರಿತು ಚರ್ಚೆ ನಡೆಯಲಿದೆ.
ಜಿಲ್ಲೆಯ ಗದಗ, ರೋಣ, ಗಜೇಂದ್ರಗಡ, ಶಿರಹಟ್ಟಿ, ನರಗುಂದ, ಲಕ್ಷ್ಮೇಶ್ವರ, ಮುಂಡರಗಿ ಸೇರಿದಂತೆ ವಿವಿಧ ತಾಲೂಕುಗಳ ಛಾಯಾಗ್ರಾಹಕರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
“ವೃತ್ತಿ ಧರ್ಮೋ ರಕ್ಷತಿ, ವೃತ್ತಿ ಧರ್ಮೋ ರಕ್ಷಿತಃ” ಎಂಬ ಆಶಯದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.


