26 ವರ್ಷಗಳ ಶೈಕ್ಷಣಿಕ ಸೇವೆ, ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರದ ಕೊಡುಗೆಗೆ ಗೌರವ
ಹುಲಕೋಟಿ: ಹುಬ್ಬಳ್ಳಿಯ ಪ್ರತಿಷ್ಠಿತ ಎನ್ಎಲ್ಇ ಸಂಸ್ಥೆಯ ಡಾ. ಆರ್.ಬಿ. ಪಾಟೀಲ ಮಹೇಶ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಐ.ಎಸ್. ಹಿರೇಮಠ ಅವರು 2026-27ನೇ ಸಾಲಿನ ‘ಕರ್ನಾಟಕ ಕೀರ್ತಿ ರತ್ನ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಸ್ವರ್ಣಭೂಮಿ ಫೌಂಡೇಶನ್, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಕ್ಷರ ಇಂಟರ್ನ್ಯಾಷನಲ್ ಕ್ಲಬ್ ಆಫ್ ಕರುನಾಡು ವತಿಯಿಂದ ಪ್ರೊ. ಹಿರೇಮಠ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿಕ್ಷಣ ಹಾಗೂ ಸಮಾಜಸೇವೆಯ ವಿವಿಧ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿರುವ ಗಣನೀಯ ಕೊಡುಗೆಯನ್ನು ಗುರುತಿಸಿ ಈ ಗೌರವ ಪ್ರದಾನ ಮಾಡಲಾಗಿದೆ.
ಪ್ರೊ. ಹಿರೇಮಠ ಅವರು ಕಳೆದ 26 ವರ್ಷಗಳಿಂದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಬೋಧನೆಯ ಜೊತೆಗೆ ಕ್ರೀಡಾ ಸಂಯೋಜಕರಾಗಿ ಹಾಗೂ ಭಾರತ ಸೇವಾದಳದ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಸೇವಾ ಮನೋಭಾವ ಮತ್ತು ಉತ್ತಮ ಜೀವನ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವರು, ಕನ್ನಡ ನಾಡು-ನುಡಿಯ ಜಾಗೃತಿ ಮೂಡಿಸುವ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಉತ್ತಮ ವಾಗ್ಮಿಯಾಗಿರುವ ಹಿರೇಮಠ ಅವರಿಗೆ ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲೆ ಹಾಗೂ ವಚನ ಸಾಹಿತ್ಯದ ಬಗ್ಗೆ ವಿಶೇಷ ಆಸಕ್ತಿ ಇದೆ. ಇವರ ಸೇವೆ ಮತ್ತು ಸಾಧನೆಗಳನ್ನು ಗುರುತಿಸಿ ಈಗಾಗಲೇ ಉತ್ತಮ ಉಪನ್ಯಾಸಕ ಪ್ರಶಸ್ತಿ, ಕನ್ನಡ ರತ್ನ ಪ್ರಶಸ್ತಿ, ಬೆಸ್ಟ್ ಟೀಚರ್ ಅವಾರ್ಡ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯಮಟ್ಟದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಹಾಗೂ ವಿಶ್ವಗುರು ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ.
ಅಭಿನಂದನೆ: ಪ್ರೊ. ಹಿರೇಮಠ ಅವರ ಸಾಧನೆಗೆ ಎನ್ಎಲ್ಇ ಸಂಸ್ಥೆಯ ಅಧ್ಯಕ್ಷ ಡಾ. ಪಿ.ವಿ. ದತ್ತಿ, ಗೌರವ ಕಾರ್ಯದರ್ಶಿ ರಾಜಾ ದೇಸಾಯಿ, ಜಂಟಿ ಕಾರ್ಯದರ್ಶಿ ಡಾ. ಬಿ.ಆರ್. ಪಾಟೀಲ, ಕಾಲೇಜಿನ ಶೈಕ್ಷಣಿಕ ಸಲಹೆಗಾರ ರಿಯಾಜ್ ಬಸರಿ, ಶೈಕ್ಷಣಿಕ ಸಂಯೋಜಕ ವಿಜಯಕುಮಾರ ಪಾಟೀಲ ಕುಲಕರ್ಣಿ, ಪ್ರಾಚಾರ್ಯ ರಾಮಮೋಹನ ಎಚ್.ಕೆ., ಉಪಪ್ರಾಚಾರ್ಯ ರಮೇಶ ಹೊಂಬಾಳೆ, ವಿಭಾಗ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿ ಶುಭ ಹಾರೈಸಿದ್ದಾರೆ.

